Tag: KMC Chairman

  • ಮಾಧ್ಯಮ, ಸಾರ್ವಜನಿಕ ಸಂಪರ್ಕ ಸಹಿತ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರತಿಷ್ಠಿತ ‘ರಾಜ್ಯ ಸಂವಹನ ಪ್ರಶಸ್ತಿ’;

    ಬೆಂಗಳೂರು: ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿ (Public Relations Council of India- PRCI) ನೀಡುವ ‘ರಾಜ್ಯ ಸಂವಹನ ಪ್ರಶಸ್ತಿ‌’ ಪ್ರದಾನ ಸಮಾರಂಭ ಗಮನಸೆಳೆಯಿತು. ವಿವಿದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರಮುಖರನ್ನು ಗುರುತಿಸಿ ನೀಡುವ ಪ್ರತಿಷ್ಠಿತ ಪ್ರಶಸ್ತಿ ಬೆಂಗಳೂರಿನಲ್ಲಿ ನೆರವೇರಿತು. PRCI ಕರ್ನಾಟಕ ಚಾಪ್ಟರ್ ಆಯೋಜಿಸಿದ್ದ ಸಮಾರಂಭದಲ್ಲಿ ಈ ಬಾರಿ ಮಾಧ್ಯಮ, ಸಂವಹನ, ಸಿನಿಮಾ, ಸಾರ್ವಜನಿಕ ಸಂಪರ್ಕ ಸಹಿತ ವಿವಿಧ ಕ್ಷೇತ್ರಗಳ 12 ಮಂದಿಗೆ ಪ್ರಶಸ್ತಿ ನೀಡಲಾಯಿತು.

    ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ, ನಿವೃತ್ತ ನ್ಯಾಯಮೂರ್ತಿ ಗಳಾದ ಡಾ. ಹೆಚ್ ಎಸ್ ಪ್ರಭಾಕರ ಶಾಸ್ತ್ರಿ ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಕೆ.ರವಿ ಸಹಿತ ಗಣ್ಯರ ಉಪಸ್ಥಿತಿಯಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಪ್ರಶಸ್ತಿ ಪ್ರದಾನ ಮಾಡಿದರು.

    ಕರ್ನಾಟಕ ಮೀಡಿಯಾ ಕೌನ್ಸಿಲ್ ಅಧ್ಯಕ್ಷ ಅಲ್ವಿನ್ ಮೆಂಡೊನ್ಸಾ, ಸಾರ್ವಜನಿಕ ಸಂಪರ್ಕ ಇಲಾಖೆಯ ನಿವೃತ್ತ ನಿರ್ದೇಶಕ ಡಿ.ಪಿ.ಮುರುಳಿಧರ್, ವಿಜಯಕರ್ನಾಟಕ ಮುಖ್ಯ ಸಂಪಾದಕ ಸುದರ್ಶನ ಚನ್ನಂಗಿಹಳ್ಳಿ, ‘ದ ಹಿಂದು’ ಹಿರಿಯ ಪತ್ರಕರ್ತ ಬಿ.ಎಸ್.ಸತೀಶ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್ ಪತ್ರಕರ್ತೆ ರಜಿನಿ ಎಂ.ಜಿ., ಬೆಂಗಳೂರು ವೈರ್ ಮಾಧ್ಯಮದ ಸಂಪಾದಕ ಶ್ಯಾಮ್ ಎಸ್., ಬೆಂಗಳೂರು ವಿಶ್ವವಿದ್ಯಾನಿಲಯದ ಮಾಧ್ಯಮ ವಿದ್ಯುನ್ಮಾನ ಇಲಾಖೆ ಅಸೋಸಿಯೇಟ್ ಪ್ರೊಫೆಸರ್ ಡಾ. ರಾಜೇಶ್ವರಿ ತಾರೇಶ್, ಸಾರ್ವಜನಿಕ ಸಂಪರ್ಕ ಅಧಿಕಾರಿ ರಾವಣನ್ ರಾಘವೇಂದ್ರ, ಸಂಯೋಜಕ- ಕಲಾವಿದ ಡಾ.ಸಂದೇಶ್ ನಾಗರಾಜ್, BBMPಯ ಕಲೆ ಮತ್ತು ಕರಕುಶಲ ಕಾರ್ಮಿಕ ಸಂಘದ ಅಧ್ಯಕ್ಷೆ ಎಸ್ ಕವಿತಾ, ಯುವ ಬಲ ಜಾಗೃತಿ ಪರಿಷತ್‌ನ ಯುವ ಸಬಲೀಕರಣ ಅಧ್ಯಕ್ಷೆ ಪ್ರಾಚಿ ಗೌಡ, ವೈಸಿಸಿ ಕಥೆ ನಿರ್ಮಾಪಕಿ ರಮ್ಯಾ ಜೋಶಿ ಅವರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

    ಈ ಸಂದರ್ಭದಲ್ಲಿ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಸಾರ್ವಜನಿಕ ಸಂಪರ್ಕ ಕ್ಷೇತ್ರವು ಇಂದು ಎಲ್ಲಾ ವಲಯಗಳಲ್ಲೂ ಅತೀ ಪ್ರಮುಖ ಅಂಗವಾಗಿ ಗುರುತಿಸಿಕೊಂಡಿದೆ. ಯಾವುದೇ ಸಚಿವರ ಅಥವಾ ಸಮಾಜದಲ್ಲಿನ ಗಣ್ಯ ವ್ಯಕ್ತಿಗಳ ಗುರುತಿವಿಕೆಯು PR ಅವರ ಮೇಲೆ ನಿಂತಿದೆ ಎಂದರು. ಸಂವಹನ ಬಹಳ ಮುಖ್ಯ. ಮೊದಲು ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಬಹಳಷ್ಟು ಸ್ವಾತಂತ್ರ್ಯ ಇತ್ತು. ಈಗ ಮಾಧ್ಯಮಗಳಲ್ಲಿ ನಿರ್ಭೀತಿಯಿಂದ ಹಾಗೂ ನಿಷ್ಪಕ್ಷಪಾತವಾಗಿ ವರದಿ ಮಾಡುವ ಸಂದರ್ಭವಿಲ್ಲ. ಎಲ್ಲಾ ಮಾಧ್ಯಮಗಳಲ್ಲಿ ಸಮತೋಲಿತ ವರದಿಗಳು ಬರಬೇಕಿದೆ. ಮಾಧ್ಯಮಗಳಲ್ಲಿ ಸಂಪಾದಕರಿಗೆ ಪೂರ್ತಿ ಸ್ವಾತಂತ್ರ್ಯ ನೀಡಬೇಕು. ಆಗ ಮಾತ್ರ ನೈಜವಾಗಿ ಮಾಧ್ಯಮಗಳು ಕೆಲಸ ಮಾಡಲು ಸಾಧ್ಯ ಎಂದು ಪ್ರತಿಪಾದಿಸಿದರು.

    ಸಾರ್ವಜನಿಕ ಸಂಪರ್ಕದ ವಿಷಯದಲ್ಲಿ ಸಾರಿಗೆ ವಿಷಯದಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿ ಅವರ ಕೆಲಸ ಯಶಸ್ವಿಯಾಗಿ ನಡೆಯುತ್ತಿದ್ದರೆ ಆ ಸಂಸ್ಥೆಗಳು ಸಾರ್ವಜನಿಕರಿಗೆ ಹತ್ತಿರವಾಗುತ್ತವೆ. ಈ ಕ್ರಮದಿಂದಾಗಿಯೇ ಸಾರಿಗೆ ಇಲಾಖೆಯ ಎಲ್ಲಾ ನಿಗಮಗಳಿಗೆ 500ಕ್ಕೂ ಹೆಚ್ಚು ಪ್ರಶಸ್ತಿಗಳು ಬಂದಿವೆ.
    KSRTC ಸಂಸ್ಥೆಯೊಂದಕ್ಕೇ 356 ಪ್ರಶಸ್ತಿಗಳು ಬಂದಿವೆ ಎಂದು ಉದಾಹರಿಸಿದರು.

    ನಿವೃತ್ತ ನ್ಯಾಯಮೂರ್ತಿ ಡಾ. ಹೆಚ್.ಎಸ್.ಪ್ರಭಾಕರ ಶಾಸ್ತ್ರಿ ಮಾತನಾಡಿ ಪುರಾಣ ಕಾಲದಿಂದಲೂ ಸಾರ್ವಜನಿಕ ಸಂಪರ್ಕ ಕ್ಷೇತ್ರವಿದೆ. ಆದರೆ ಅದರ‌ ಪಾತ್ರಗಳು ಭಿನ್ನವಾಗಿದ್ದವು. ರಾಮಾಯಾಣ, ಮಹಾಭಾರತದಲ್ಲಿ‌ ಕೂಡ ಸಂವಹನ ಸಾರ್ವಜನಿಕ ಸಂಪರ್ಕವಿತ್ತು ಎಂದರು. ಗೃಹಿಣಿ ತನ್ನ ಮನೆಯ ಹಿತ ಬಯಸುವ ರೀತಿಯಲ್ಲೇ ಕಂಪನಿಗಳ ಬಗ್ಗೆ ಅದರ ಪಿಆರ್‌ಒ ಹಿತ ಕಾಪಾಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.

    PRCI ಸಂಸ್ಥಾಪಕ ಜಯರಾಮ್ ಮಾತನಾಡಿ ದೇಶದಲ್ಲಿ 59 ಚಾಪ್ಟರ್ ಇದೆ. ನಾನು ಕಿರುತೆರೆಯಲ್ಲಿ, ಪತ್ರಕರ್ತನಾಗಿ ಹಾಗೂ ಸಾರ್ವಜನಿಕ‌ ಸಂಪರ್ಕಾಧಿಕಾರಿಯಾಗಿ ಕೆಲಸ ಮಾಡಿದ್ದೇನೆ. ಸಮಾಜದಲ್ಲಿ‌ ಸಾರ್ವಜನಿಕ ಸಂಪರ್ಕಾಧಿಕಾರಿಯ ಹುದ್ದೆ ಮಹತ್ವದ್ದಾಗಿದೆ ಎಂದರು. ಪಿಆರ್ ಸಿಐನಲ್ಲಿ 80 ವಿವಿಧ ವಲಯಗಳ ಕ್ಷೇತ್ರಗಳ ತಜ್ಞರಿದ್ದಾರೆ. ನವೆಂಬರ್ ನಲ್ಲಿ ಮಂಗಳೂರಿನಲ್ಲಿ ಪಿಆರ್ ಸಿಐ ಜಾಗತಿಕ ಸಮಾವೇಶ ಆಯೋಜಿಸುತ್ತಿದ್ದೇವೆ. ಅದರಲ್ಲಿ ಜಗತ್ತಿನಾದ್ಯಂತ 500ಕ್ಕೂ ಹೆಚ್ಚು ಗಣ್ಯರು ಆಗಮಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

    ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ವೇಣುಗೋಪಾಲ್, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನ್, ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿ ಉಪಾಧ್ಯಕ್ಷರೂ ಆದ KSRTC ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಲತಾ ಟಿ.ಎಸ್, PRCI ಬೆಂಗಳೂರು ವಲಯ ಅಧ್ಯಕ್ಷ ರಾಮಕೃಷ್ಣ, ಸಂಘಟನೆಯ ಪ್ರಮುಖರಾದ ಸ್ವಾಮಿ, ಆನಂದ್, ಚಿನ್‌ಯ್ ಪ್ರವೀಣ್ ಸಹಿತ ಅನೇಕ ಗಣ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು.