Tag: MUDA Scam

  • ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಕಂಟಕ; ಕೆಐಎಡಿಬಿ ಹಗರಣ ಬಗ್ಗೆ ಇ.ಡಿ.ಗೆ ದೂರು; ಪ್ರಧಾನಿ ಮೋದಿ, ಷಾ ಅವರಿಗೂ ಅಹವಾಲು

    ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಕೋಲಾಹಲ ಎಬ್ಬಿಸಿರುವ ಮುಡಾ ನಿವೇಶನ ಅಕ್ರಮ, ವಾಲ್ಮೀಕಿ ನಿಗಮದ ಕರ್ಮಕಾಂಡದ ಬೆನ್ನಲ್ಲೇ ಸಿದ್ದರಾಮಯ್ಯ ಸರ್ಕಾರಕ್ಕೆ KIADB ಬಹುಕೋಟಿ ಹಗರಣವೂ ಸಂಕಷ್ಟ ತಂದೊಡ್ಡಿದೆ. ಕುತೂಹಲಕಾರಿ ಬೆಳವಣಿಗೆಯಲ್ಲಿ ‘ದೇವನಹಳ್ಳಿ KIADB ಭೂಸ್ವಾಧೀನ ಅವ್ಯವಹಾರ’ ಆರೋಪ ಕುರಿತಂತೆ ಸಿಎಂ ಸಿದ್ದರಾಮಯ್ಯ, ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹಾಗೂ ಕೆ.ಎ.ಎಸ್ ಅಧಿಕಾರಿ ಬಾಳಪ್ಪ ಹಂದಿಗುಂದ ವಿರುದ್ಧ ಜಾರಿ ನಿರ್ದೇಶನಾಲಯ (ED)ದ ನಿರ್ದೇಶಕರಿಗೆ ದೂರು ಸಲ್ಲಿಕೆಯಾಗಿದೆ. ‘ಸಿಟಿಜನ್ ರೈಟ್ಸ್ ಫೌಂಡೇಶನ್’ ಈ ದೂರನ್ನು ಸಲ್ಲಿಸಿದ್ದು, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ನಿರ್ದೇಶನ ಕೋರಿ ಕೇಂದ್ರ ಸರ್ಕಾರಕ್ಕೂ ದೂರು ಸಲ್ಲಿಕೆಯಾಗಿದೆ.

    ಕೈಗಾರಿಕೋದ್ಯಮಗಳನ್ನು ಉತ್ತೇಜಿಸಲು, ಉದ್ಯಮ ಸಂಸ್ಥೆಗಳಿಗೆ ಮೂಲಸೌಕರ್ಯ ಕಲ್ಪಿಸುವ ಸಂಬಂಧ ಸ್ಥಾಪಿಸಲಾಗಿರುವ ರಾಜ್ಯ ಸರ್ಕಾರದ ಅಧೀನದ ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ (KIADB) ಇದೀಗ ಹಗರಣಗಳ ಕೂಪವಾಗಿದ್ದು, ಒಂದೊಂದೇ ಕರ್ಮಕಾಂಡಗಳು ಬೆಳಕಿಗೆ ಬರುತ್ತಿವೆ. ಅದರಲ್ಲೂ ಸರ್ಕಾರಿ ಜಮೀನಿಗೆ ನಕಲಿ ಮಾಲೀಕರನ್ನು ಸೃಷ್ಟಿಸಿ ಪರಿಹಾರದ ಮೊತ್ತವನ್ನು ಪಾವತಿಸಿರುವ ಆರೋಪ ಕೇಳಿಬಂದಿದೆ. ಈ ಹಗರಣದಲ್ಲಿ KIADB ಭೂಸ್ವಾಧೀನಾಧಿಕಾರಿಯಾಗಿರುವ KAS ಅಧಿಕಾರಿ ಬಾಳಪ್ಪ ಹಂದಿಗುಂದ ಅವರು ಅಧಿಕಾರ ದುರುಪಯೋಗಪಡಿಸಿದ್ದಾರೆ ಎಂದು ‘ಸಿಟಿಜನ್ ರೈಟ್ಸ್ ಫೌಂಡೇಶನ್’ ಅಧ್ಯಕ್ಷ ಕೆ.ಎ.ಪಾಲ್ ಅವರು ಈ ದೂರು ಸಲ್ಲಿಸಿದ್ದಾರೆ.

    KIADB ಮೂಲಕ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಸಮೀಪ ನೂರಾರು ಎಕ್ರೆ ಜಮೀನನ್ನು ಕೈಗಾರಿಕಾ ಉದ್ದೇಶಗಳಿಗಾಗಿ ವಶಪಡಿಸಿಕೊಳ್ಳಲು ನೋಟಿಫಿಕೇಶನ್ ಹೊರಡಿಸಲಾಗಿತ್ತು. ಈ ಪೈಕಿ ದೇವನಹಳ್ಳಿ ತಾಲೂಕಿನ ಕುಂದಾಣ ಹೋಬಳಿಯ ಚಪ್ಪರದಹಳ್ಳಿ ಗ್ರಾಮದಲ್ಲಿ ನಡೆದ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿದೆ. ಕುಂದಾಣ ಹೋಬಳಿಯ ಚಪ್ಪರದಹಳ್ಳಿ ಗ್ರಾಮದ ಸರ್ವೇ ನಂಬರ್ 7ರಲ್ಲಿ ಅನಧಿಕೃತವಾಗಿ ಕೃಷಿ ಮಾಡುತ್ತಿದ್ದ ಹಲವರಿಗೆ 1984ರಲ್ಲಿ ಆಗಿನ ತಹಸೀಲ್ದಾರರು ‘ಎವಿಕ್ಷನ್ ನೋಟಿಸ್’ ಜಾರಿ ಮಾಡಿದ್ದರು. ಅನಂತರ ಸದರಿ ಜಮೀನನ್ನು ‘ಸರ್ಕಾರಿ ಫಡಾ’ ಎಂದು ಘೋಷಿಸಲಾಗಿತ್ತು. ಆದರೆ, ಕೆಐಎಡಿಬಿ ವತಿಯಿಂದ ಭೂಸ್ವಾಧೀನ ಪ್ರಸ್ತಾಪವಾದ ಸಂದರ್ಭದಲ್ಲಿ ಹಲವರನ್ನು ಜಮೀನು ಮಾಲೀಕರೆಂದು ಗುರುತಿಸಿ ಪರಿಹಾರ ಹಂಚಲಾಗಿದೆ ಎಂಬ ಆರೋಪ ಕೇಳಿಬಂದಿದೆ. 27.07.202 ರಂದು ಬಾಳಪ್ಪ ಹಂದಿಗುಂದ (ವಿಶೇಷ ಭೂಸ್ವಾಧೀನಾಧಿಕಾರಿ-2) ಅವರ ಉಪಸ್ಥಿತಿಯಲ್ಲಿ ನಡೆದ ತೀರ್ಮಾನ ಹಾಗೂ ಅವರ ಆದೇಶದಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು EDಗೆ ಸಲ್ಲಿಸಲಾಗಿರುವ ದೂರಿನಲ್ಲಿ ಗಮನಸೆಳೆಯಲಾಗಿದೆ.

    ಈ ಸಂಬಂಧ ತನಿಖೆಗೆ ಕೋರಿ 12.09.2024ರಂದು ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ, ಕೈಗಾರಿಕಾ ಸಚಿವರಿಗೆ ದೂರು ನೀಡಲಾಗಿತ್ತು. ಇದಕ್ಕೆ ಸ್ಪಂಧಿಸದಿದ್ದಾಗ 09.10.2024ರಂದು ಲೋಕಾಯುಕ್ತರಿಗೆ ದೂರು ಸಲ್ಲಿಸಲಾಗಿದೆ. ಅದಕ್ಕೂ ಸರ್ಕಾರ ಸ್ಪಂಧಿಸದ ಹಿನ್ನೆಲೆ ಅಕ್ಟೊಬರ್ 23ರಂದು EDಗೆ ಅಹವಾಲು ಸಲ್ಲಿಸಲಾಗಿದ್ದು, ಬುಧವಾರ (06.11.2024) ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಜಾರಿ ನಿರ್ದೇಶನಾಲಯದ ನಿರ್ದೇಶಕರಿಗೆ ದೂರು ಸಲ್ಲಿಸಿ ಬಹುಕೋಟಿ KIADB ಹಗರಣ ಬಗ್ಗೆ ಸಮಗ್ರ ತನಿಖೆ ನಡೆಸಲು ಕೆ.ಎ.ಪಾಲ್ ಮನವಿ ಮಾಡಿದ್ದಾರೆ.

    ದೇವನಹಳ್ಳಿಯ ಗೊಲ್ಲಹಳ್ಳಿ, ದೊಡ್ಡಗೊಲ್ಲಹಳ್ಳಿ, ಜೋಡಿಗ್ರಾಮ, ಕುಂದಾಣ, ಚಪ್ಪರದಹಳ್ಳಿ, ಕೋಡಿಹಳ್ಳಿ ಕೋಣಗಟ್ಟಿ, ಬೈದೇನಹಳ್ಳಿ, ಹಾರೋನಹಳ್ಳಿ, ಹರಳೂರು, ಮೊದಲಾದ ಹತ್ತಾರು ಹಳ್ಳಿಗಳಲ್ಲಿ ಜಮೀನನ್ನು ಕೆಐಎಡಿಬಿ ವತಿಯಿಂದ ಸ್ವಾಧೀನಪಡಿಸಿ ವಿವಿಧ ಕಂಪನಿಗಳಿಗೆ ಹಂಚಿಕೆ ಮಾಡಲಾಗಿದೆ. ಸರ್ಕಾರದ ಭೂಮಿಯನ್ನು ಸ್ವಾಧೀನ ಪಡೆದು ನಕಲಿ ವ್ಯಕ್ತಿಗಳಿಗೆ ಪರಿಹಾರ ಪಾವತಿಸಲಾಗಿದೆ. ಚಪ್ಪರದಹಳ್ಳಿ ಗ್ರಾಮದ ಸರ್ವೇ ನಂಬರ್ 7ರಲ್ಲಿ 45 ಎಕರೆ 15 ಗುಂಟೆ ಪೈಕಿ 5.5 ಎಕರೆ ಜಮೀನನ್ನು ಹಂಗಾಮಿ ಸಾಗುವಳಿ ಭೂಮಿಯೇ ಎಂದು ಪರಿಶೀಲಿಸದೆ ಹಲವರ ಹೆಸರಿನಲ್ಲಿ ಪರಿಹಾರ ಪ್ರಕಟಿಸಲಾಗಿದೆ. 38.5 ಎಕರೆ ಹಂಗಾಮಿ ಸಾಗುವಳಿ ಜಾಮೀನು ‘ಸರ್ಕಾರಿ ಫಡಾ’ ಎಂದು ತಿಳಿದಿದ್ದರೂ ಅಕ್ರಮವಾಗಿ ಪರಿಹಾರದ ಮೊತ್ತ ಪಾವತಿಯಾಗಿದೆ ಎಂದು ಈ ದೂರಿನಲ್ಲಿ ಗುರುತರ ಆರೋಪ ಮಾಡಲಾಗಿದೆ.

    ಬಾಳಪ್ಪ ಹಂದಿಗುಂದ ವಿರುದ್ದದ ಇತರ ಪ್ರಕರಣಗಳ ಬಗ್ಗೆಯೂ ಈ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬಾಳಪ್ಪ ಹಂದಿಗುಂದ ರವರು 2020ರಲ್ಲಿ ಬೇರೆ ಇಲಾಖೆಯ ಹೆಚ್ಚವರಿ ಅಧಿಕಾರಿಗಳಾಗಿರುವಾಗ ಸಾದಳ್ಳಿ ಗ್ರಾಮದ ರೈತರಿಗೆ 83 ಕೋಟಿ ರೂಪಾಯಿಗಳನ್ನು ವರ್ಗಾವಣೆ ಮಾಡಿ ಗೋಲ್ ಮಾಲ್ ಮಾಡಿರುವ ಆರೋಪವೂ ಇದೆ. ಒಂದೇ ಜಮೀನಿಗೆ ಎರಡೆರಡು ಬಾರಿ ಪರಿಹಾರದ ಹಣ ಪಾವತಿಸಿರುವ ಅಕ್ರಮವೂ ನಡೆದಿದೆ. ಕೆಲವು ಜಮೀನನ್ನು ಅಕ್ರಮವಾಗಿ ಡಿನೋಟಿಫಿಕೇಷನ್ ಮಾಡಲಾಗಿದೆ.

    ದೇವನಹಳ್ಳಿ ತಾಲೂಕಿನ ಬೈದೇನಹಳ್ಳಿ, ದೊಡ್ಡಗೊಲ್ಲಹಳ್ಳಿ, ಚಪ್ಪರದಹಳ್ಳಿ, ಹರೋನಹಳ್ಳಿ ಮೊದಲಾದ ಗ್ರಾಮಗಳಲ್ಲಿ ಕೆಐಎಡಿಬಿ ಭೂಸ್ವಾಧೀನ ನಡೆಸಿದ್ದು, ಭೂಮಿಯ ಮಾಲೀಕರಿಗೆ ಪ್ರತೀ ಎಕರೆಗೆ 1.35 ಕೋಟಿ ರೂಪಾಯಿ ಪಾವತಿಸಿ, ಆ ಮೊತ್ತದಿಂದ ಕಮೀಷನ್ ಸಂಗ್ರಹಿಸಲಾಗಿದೆ ಎಂಬ ರೈತರು ‘ಸಿಟಿಜನ್ ರೈಟ್ಸ್ ಫೌಂಡೇಷನ್’ಗೆ ದೂರು ನೀಡಿದ್ದು, ಮುಖ್ಯಮತ್ರಿ ಸಿದ್ದರಾಮಯ್ಯ ಮತ್ತು ಸಚಿವ ಎಂ.ಬಿ.ಪಾಟೀಲ್ ರವರಿಗೆ ತಲುಪಿಸಲು ಪ್ರತೀ ಎಕರೆಗೆ 35 ಲಕ್ಷ ರೂಪಾಯಿ ಕಮೀಷನ್ ಸಂಗ್ರಹಿಸಲಾಗಿದೆ ಎಂದೂ ಆರೋಪಿಸಿದ್ದಾರೆ. ಅನೇಕ ಭೂ ಮಾಲೀಕರಿಗೆ ಹಣ ನೀಡುವ ಬದಲು 50:50 ಅನುಪಾತದಲ್ಲಿ ನಿವೇಶನ ಪಡೆಯುವ ಒಪ್ಪಂದ ಮಾಡಿಸಿ, ಆ ಜಮೀನನ್ನು ತಮ್ಮ ಬೇನಾಮಿ ವ್ಯಕ್ತಿಗಳಿಗೆ ಸೇಲ್ ಅಗ್ರಿಮೆಂಟ್ ಮಾಡಿಸಲಾಗಿದೆ ಎಂದೂ ಈ ದೂರಿನಲ್ಲಿ ಆರೋಪಿಸಲಾಗಿದೆ.

    ಬಾಳಪ್ಪ ಹಂದಿಗುಂದ ಒಬ್ಬ ಪ್ರಭಾವಿ ಅಧಿಕಾರಿಯಾಗಿದ್ದು, ಅವ್ಯವಹಾರ ಪ್ರಕರಣದಲ್ಲಿ ಅಮಾನತಾಗಿದ್ದರೂ ಅದೇ ಇಲಾಖೆಯ ಹುದ್ದೆಯಲ್ಲಿ ಮುಂದುವರಿಯುವಷ್ಟು ಪ್ರಭಾವಿ. ಲೋಕಾಯುಕ್ತ ಹಾಗೂ ವಿವಿಧ ಪೊಲೀಸ್ ಠಾಣೆಗಳಲ್ಲಿ ಇವರ ವಿರುದ್ಧ ಪ್ರಕರಣಗಳಿದ್ದರೂ ಕೆಐಎಡಿಬಿಯಲ್ಲೇ ಮುಂದುವರಿಸಲು ಸಚಿವ ಎಂಬಿ ಪಾಟೀಲ್ ಶಿಫಾರಸು ಮಾಡಿದ್ದು, ಸಿಎಂ ಅದಕ್ಕೆ ಒಪ್ಪಿರುವ ಕ್ರಮವೂ ಆಕ್ಷೇಪಾರ್ಹ ಎಂದು ದೂರುದಾರ ಕೆ.ಎ.ಪಾಲ್ ಅವರು ಈ ದೂರಿನಲ್ಲಿ ಹೇಳಿದ್ದಾರೆ.

    ಈ ನಡುವೆ ಕೆಐಎಡಿಬಿ ವತಿಯಿಂದ ನಡೆದಿದೆ ಎನ್ನಲಾಗಿರುವ ಅಕ್ರಮಗಳ ವಿರುದ್ಧ ‘ರೈತ ಹೋರಾಟ ಸಮಿತಿ’ ನೇತೃತ್ವದಲ್ಲಿ ಕಳೆದ 6-7 ತಿಂಗಳುಗಳಿಂದ ಪ್ರತಿಭಟನೆಗಳು ನಡೆಯುತ್ತಿದ್ದರೂ ಸರ್ಕಾರ ಸಮಸ್ಯೆ ಬಗೆಹರಿಸದೆ ಇರುವುದರಿಂದ ಕೇಂದ್ರ ಸರ್ಕಾರದ ಮಧ್ಯ ಪ್ರವೇಶಿಸಬೇಕೆಂದು ಕೆ.ಎ.ಪಾಲ್ ಆಗ್ರಹಿಸಿದ್ದಾರೆ.

  • ಬೆಂಗಳೂರಿನಲ್ಲಿ ಭೂಸ್ವಾದೀನಪಡಿಸಿದರೆ ಎಕರೆಗೆ 12.1 ಕೋ.ರೂ., ಮೈಸೂರಿನಲ್ಲಿ 62 ಕೋ.ರೂ.; ಇದು ಹೇಗೆ ಸಾಧ್ಯ?

    ಬೆಂಗಳೂರು; ರಾಜಧಾನಿ ಬೆಂಗಳೂರಿನಲ್ಲಿ ಭೂಸ್ವಾದೀನಪಡಿಸಿದರೆ ಎಕರೆಗೆ 12.1 ಕೋಟಿ ರೂಪಾಯಿ, ಮೈಸೂರಿನಲ್ಲಿ 62 ಕೋಟಿ ರೂಪಾಯಿ.  ಇದು ಹೇಗೆ ಸಾಧ್ಯ? ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಬಿಜೆಪಿ ನಾಯಕ, ಮಾಜಿ ಸಚಿವ ಸುರೇಶ್ ಕುಮಾರ್ ಪ್ರಶ್ನಿಸಿದ್ದಾರೆ.

    ಮುಡಾ ಹಗರಣ ಕುರಿತಂತೆ ಸಿಎಂ ಹೇಳಿಕೆಗಳಿಗೆ ಪ್ರತಿಕ್ರಿಯಿಸಿ ಹೇಳಿಕೆ ಬಿಡುಗಡೆ ಮಾಡಿರುವ ಸುರೇಶ್ ಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಮೈಸೂರಿನಲ್ಲಿ “ಜನಾಂದೋಲನ” ನಡೆಯುತ್ತಿರುವ ಈ ಸಂದರ್ಭದಲ್ಲಿ ಅತ್ಯಂತ ಮಹತ್ವದ ಕೋರಿಕೆಯನ್ನು ಸರ್ಕಾರದ ಮುಂದಿಟ್ಟಿದ್ದಾರೆ.

    ಕೆಐಎಡಿಬಿ ಬೆಂಗಳೂರು ಉತ್ತರ ತಾಲೂಕಿನ ಹೆಬ್ಬಾಳ ಮತ್ತು ಹೆಬ್ಬಾಳ ಅಮಾನಿಕೆರೆ ಗ್ರಾಮಗಳಲ್ಲಿ ಸ್ವಾಧೀನಪಡಿಸಿಕೊಂಡಿರುವ ಪ್ರತಿ ಎಕರೆ ಭೂಮಿಗೆ 12.10 ಕೋಟಿ ರೂ. ದರ ನಿಗದಿಪಡಿಸಿದೆ.ಇದು ಮಾರುಕಟ್ಟೆ ದರಕ್ಕಿಂತ ತುಂಬಾ ಕಡಿಮೆ ಎಂದು ಭಾವಿಸುತ್ತೇನೆ. ಆದರೆ ತಮ್ಮ ಮೈಸೂರಿನ ಹೊರವಲಯದ ಕೆಸರೆ ಗ್ರಾಮದಲ್ಲಿ 3.16 ಎಕರೆ ಜಮೀನಿನ ಬೆಲೆ 62 ಕೋಟಿ ರೂಪಾಯಿ ಎಂಬುದು ನಿಮ್ಮ ಹೇಳಿಕೆಯಿಂದಲೇ ತಿಳಿದುಬಂದಿದೆ ಎಂದು ಸಿದ್ದರಾಮಯ್ಯ ಅವರನ್ನು ಕುಟುಕಿದ್ದಾರೆ

    ಮುಖ್ಯಮಂತ್ರಿಯ ಹೇಳಿಕೆಯನ್ನು ಗಮನದಲ್ಲಿಟ್ಟುಕೊಂಡು, ಕರ್ನಾಟಕದಲ್ಲಿ ಭೂಸ್ವಾಧೀನದ ಎಲ್ಲಾ ಪ್ರಕರಣಗಳಲ್ಲಿ ಭೂಸ್ವಾಧೀನಕ್ಕೆ ಪರಿಹಾರವನ್ನು ಹೆಚ್ಚಿಸಬೇಕುಬೆಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

    ಎಲ್ಲಾ ರೀತಿಯ (ಬಿಡಿಎ, ನೀರಾವರಿ, ಮೆಟ್ರೋ, ಹೆದ್ದಾರಿ…) ಭೂಸ್ವಾಧೀನ ಪ್ರಕರಣಗಳಲ್ಲಿ ಪರಿಹಾರವನ್ನು ನಿಗದಿಪಡಿಸುವಾಗ ಸರ್ಕಾರವು ಕೆಸರೆ ಗ್ರಾಮದ 62 ಕೋಟಿ ರೂ ಗಳನ್ನೇ ಮಾನದಂಡ ದರವಾಗಿ ಇರಿಸಿಕೊಳ್ಳಬೇಕು ಎಂದು ಪ್ರತಿಪಾದಿಸಿರುವ ಸುರೇಶ್ ಕುಮಾರ್, ಮುಖ್ಯಮಂತ್ರಿಗಳಿಗೆ ಅನ್ವಯಿಸುವ ದರ ಶ್ರೀಸಾಮಾನ್ಯನಿಗೂ ಅನ್ವಯಿಸಬೇಕಲ್ಲವೇ? ಇದಕ್ಕೆ ಸಾಮಾಜಿಕ ನ್ಯಾಯವೆಂದು ಹೇಳುತ್ತಾರೆ ಎಂದು ಅಭಿಪ್ರಾಯ ಮುಂದಿಟ್ಟಿದ್ದಾರೆ..

  • ದೇವೇಗೌಡರ ಕಟುಂಬದ ವಿರುದ್ದ ಮಾಡಿದ್ದ ಆರೋಪವನ್ನು ಹಿಂಪಡೆಯುತ್ತೀರ? BSYಗೆ ರಮೇಶ್ ಬಾಬು ಮಾರ್ಮಿಕ ಪ್ರಶ್ನೆ..!

    ಬೆಂಗಳೂರು: ಮುಡಾ ಸೈಟ್ ಹಗರಣ ಇದೀಗ ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ ಸಂಘರ್ಷವನ್ನು ಹುಟ್ಟುಹಾಕಿದೆ. ಸಿಎಂ ಸಿದ್ದರಾಮಯ್ಯ ವಿರುದ್ದ ಆರೋಪ ಕೇಳಿದ ತಕ್ಷಣ ಅವರ ರಾಜೀನಾಮೆಗೆ ಒತ್ತಾಯಿಸುತ್ತಿರುವ ಬಿಜೆಪಿ ನಾಯಕರ ನಿಲುವಿನ ಬಗ್ಗೆ ಪ್ರದೇಶ ಕಾಂಗ್ರೆಸ್ ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಕಿಡಿ ಕಾರಿದ್ದಾರೆ.

    ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಆರೋಪ ಕೇಳಿಬಂದ ತಕ್ಷಣ ಅವರ ರಾಜೀನಾಮೆಗೆ ಆಗ್ರಹಿಸುತ್ತಿರುವ ಮಾಜಿ ಸಿಎಂ ಯಡಿಯೂರಪ್ಪ ಅವರು ತಾವೇ ಈ ಹಿಂದೆ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ವಿರುದ್ದ ಮಾಡಿರುವ ಆರೋಪಗಳನ್ನು‌ ಹಿಂಪಡೆಯುತ್ತಾರ ಹಾಗೂ ಅಶೋಕ್ ಅವರ ಭೂ ಅಕ್ರಮ ಬಗ್ಗೆ ತನಿಖೆಗೆ ಒತ್ತಾಯಿಸುತ್ತಾರ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

    ಮಾಜಿ ಶಾಸಕರೂ ಆಗಿರುವ ರಮೇಶ್ ಬಾಬು ಅವರು ಈ ಸಂಬಂಧ ಬಿಡುಗಡೆ ಮಾಡಿರುವ ಮಾಧ್ಯಮ ಹೇಳಿಕೆ ಗಮನಸೆಳೆದಿದೆ. ಕರ್ನಾಟಕದಲ್ಲಿ ಜನನಾಯಕರಾಗಿ ಬೆಳೆದವರಲ್ಲಿ ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪನವರೂ ಒಬ್ಬರು. ಜನನಾಯಕರು ಸಂದರ್ಭಕ್ಕೆ ಪೂರಕವಾಗಿ ತಮ್ಮ ನಿಲುವು ಮತ್ತು ಹೇಳಿಕೆಗಳನ್ನು ಬದಲಾಯಿಸಿದರೆ ಅವರು ಜನನಾಯಕರಾಗುವುದಿಲ್ಲ ಎಂದು ರಮೇಶ್ ಬಾಬು ಪ್ರತಿಪಾದಿಸಿದ್ದಾರೆ.

    ಕರ್ನಾಟಕದಲ್ಲಿ ಜೆಡಿಎಸ್ ಪಕ್ಷದ ಕುಮಾರ ಸ್ವಾಮಿ ಅವರೊಂದಿಗೆ ಸಮ್ಮಿಶ್ರ ಸರ್ಕಾರ ನಡೆಸಿದ ಯಡಿಯೂರಪ್ಪನವರು, ಕುಮಾರಸ್ವಾಮಿ ಅವರಿಂದ ಅಧಿಕಾರ ವಂಚಿತರಾಗಿ ವಚನ ಭ್ರಷ್ಟತೆಯ ಆರೋಪ ಮಾಡಿ ಇದೇ ಕಾರಣಕ್ಕಾಗಿ ಹೋರಾಟ ಮಾಡಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದರು. ತದನಂತರ ಬೇರೆಬೇರೆ ಸಂದರ್ಭಗಳಲ್ಲಿ ಜೆಡಿಎಸ್ ಪಕ್ಷದ ಮೇಲೆ, ದೇವೇಗೌಡರ ಮೇಲೆ ಮತ್ತು ಅವರ ಕುಟುಂಬದ ಮೇಲೆ ವಿಧಾನ ಮಂಡಲದ ಒಳಗಡೆ ಗುರುತರವಾದ ಆರೋಪಗಳನ್ನು ಮಾಡಿ ಆ ಆರೋಪಗಳು ಧಾಖಲೆ ಆಗಿರುತ್ತವೆ. ಆದರೆ ಮಗನ ರಾಜಕಾರಣದ ಭವಿಷ್ಯದ ಅನಿವಾರ್ಯತೆಗಾಗಿ ಜೆಡಿಎಸ್ ಪಕ್ಷ ಮತ್ತು ಹೆಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಕೈ ಜೋಡಿಸಿ ಶನಿವಾರ (ಆ.3) ಪಾದಯಾತ್ರೆಗೆ ಚಾಲನೆ ನೀಡುವ ಮೂಲಕ ವರ್ತಮಾನ ಕಾಲದ ದುರಂತ ನಾಯಕರಾಗಿ ಕಾಣಿಸಿಕೊಂಡಿದ್ದಾರೆ ಎಂದು ಅವರು ಬಣ್ಣಿಸಿದ್ದಾರೆ.

    ಇದೇ ವೇಳೆ, ಕರ್ನಾಟಕದ ಜನರಿಗೆ ಕೆಲವು ಪ್ರಶ್ನೆಗಳಿಗೆ ಯಡಿಯೂರಪ್ಪ ಅವರು ಸಾರ್ವಜನಿಕವಾಗಿ  ಕಾಂಗ್ರೆಸ್ ಪಕ್ಷದ ಪರವಾಗಿ ಉತ್ತರಿಸಬೇಕಿದೆ ಎಂದಿರುವ ರಮೇಶ್ ಬಾಬು, 10 ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.‌

    1. ಯಡಿಯೂರಪ್ಪನವರು 2008ರಲ್ಲಿ JDS ಪಕ್ಷದ ಮೇಲೆ, ಹೆಚ್.ಡಿ.ಕುಮಾರಸ್ವಾಮಿ ಮೇಲೆ ಮಾಡಿದ್ದ ವಚನ ಭ್ರಷ್ಟತೆಯ ಆರೋಪವನ್ನು ಹಿಂದಕ್ಕೆ ಪಡೆಯುತ್ತಾರೆಯೇ?
    2. ಈ ರಾಜ್ಯದ ಸಿಎಂ ಆಗಿ 17-03-2011ರಲ್ಲಿ ವಿಧಾನ ಪರಿಷತ್‌ನಲ್ಲಿ ಮಾತನಾಡಿ ದೇವೇಗೌಡರು ತನ್ನ ಕುಟುಂಬದವರಿಗೆ ಮೈಸೂರಿನ ಮೂಡ’ದಲ್ಲಿ ಅಕ್ರಮವಾಗಿ 48 ನಿವೇಶನಗಳನ್ನು ನೀಡಿರುವುದಾಗಿ ಮಾಡಿದ್ದ ಆರೋಪವನ್ನು ಹಿಂದಕ್ಕೆ ಪಡೆಯುತ್ತಾರೆಯೇ?
    3. ಅದೇ ದಿನ ವಿಧಾನ ಪರಿಷತಿನಲ್ಲಿ ಆರೋಪ ಮಾಡಿ ಜಂತ್ ಕಲ್ ಮೈನಿಂಗ್ ನವೀಕರಣದಲ್ಲಿ ದೇವೇಗೌಡರ ಕುಟುಂಬದವರು ಪಾಲುಗರಿಕೆ ಪಡೆದಿದ್ದಾರೆ ಎಂದು ಮಾಡಿದ್ದ ಆರೋಪವನ್ನು ಹಿಂದಕ್ಕೆ ಪಡೆಯುತ್ತಾರೆಯೇ?
    4. ಕುಮಾರ ಸ್ವಾಮಿ ಅವರಿಗೆ ಮೂಡದಲ್ಲಿ ನಿವೇಶನ ಸಂಖ್ಯೆ. 17B(1) ವಿಸ್ತೀರ್ಣ 75X280 ಅಡಿ 1984 ರಲ್ಲಿ ಅಕ್ರಮವಾಗಿ ಹಂಚಿಕೆಯಾಗಿದೆ ಎಂದು ಮಾಡಿದ್ದ ಆರೋಪವನ್ನು ಹಿಂದಕ್ಕೆ ಪಡೆಯುತ್ತಾರೆಯೇ?
    5. 25-05-2018 ರಲ್ಲಿ ಕರ್ನಾಟಕ ವಿಧಾನ ಸಭೆಯ ವಿರೋಧ ಪಕ್ಷದ ನಾಯಕರಾಗಿ ಅವಿಶ್ವಾಸ ನಿರ್ಣಯದ ಮೇಲೆ ಮಾತನಾಡುವಾಗ, ಹೆಚ್. ಡಿ. ಕುಮಾರ ಸ್ವಾಮಿ ರವರು ತಾವು ಬೆಂಬಲ ವಾಪಸ್ಸು ಪಡೆದ ನಂತರ ಅಂದಿನ ಮುಖ್ಯ ಮಂತ್ರಿಯಾಗಿ 22 ಗಣಿಗಾರಿಕೆ ಗುತ್ತಿಗೆ ಅನುಮೋದನೆ ಮಾಡಿ ಅಕ್ರಮ ಎಸಗಿದ್ದಾರೆ ಎಂದು ಮಾಡಿದ್ದ ಆರೋಪವನ್ನು ಹಿಂದಕ್ಕೆ ಪಡೆಯುತ್ತಾರೆಯೇ?
    6. ಅದೇ ದಿನ ವಿಧಾನ ಸಭೆಯಲ್ಲಿ ಮಾತನಾಡುವಾಗ 1984 ರಲ್ಲಿ ದೇವೇಗೌಡರು ಅವರ ಕುಟುಂಬದವರಿಗೆ ಮೂಡದಲ್ಲಿ 46 ನಿವೇಶನ ಹಂಚಿಕೆ ಮಾಡಿದ್ದರು ಎಂದು ಮಾಡಿದ್ದ ಆರೋಪವನ್ನು ಹಿಂದಕ್ಕೆ ಪಡೆಯುತ್ತಾರೆಯೇ?
    7. ಬಿ.ಎಸ್.ಯಡಿಯೂರಪ್ಪನವರು ಅಂದಿನ ರಾಜ್ಯಪಾಲರು ತಮ್ಮ ವಿರುದ್ದ ಬಂದ ಆರೋಪದ ಮೇಲೆ Prosecution ವಿಚಾರಣೆಗೆ ಅನುಮತಿ ನೀಡಿದ್ದನ್ನು ಕರ್ನಾಟಕ ಹೈ ಕೋರ್ಟ್ ನಲ್ಲಿ ರಿಟ್ ಪಿಟಿಷನ್ ಮುಖಾಂತರ ಪ್ರಶ್ನೆ ಮಾಡಿದ್ದು, ಹೈ ಕೋರ್ಟ್ ಇವರ ಅರ್ಜಿಯನ್ನು ಮಾನ್ಯ ಮಾಡಿ ರಾಜ್ಯಪಾಲರು ವಿಚಾರಣೆಗೆ ಅನುಮತಿ ನೀಡಿದ್ದು, ತಪ್ಪು ಎಂದು ಹೇಳಿರುತ್ತದೆ. ಯಡಿಯೂರಪ್ಪನವರು ಈ ತೀರ್ಪುನ್ನು ಒಪ್ಪುತ್ತಾರೆಯೇ ಅಥವಾ ನಿರಾಕರಿಸುತ್ತಾರೆಯೇ?
    8. ಯಡಿಯೂರಪ್ಪನರು ತಮ್ಮ ಪ್ರಕರಣದಲ್ಲಿ ಅರ್ಜಿದಾರರಾದ ಬಾಲರಾಜ್ ಮತ್ತು ಶಿರಾಜಿನ್ ಭಾಷಾ ರವರನ್ನು ಬಳಸಿಕೊಂಡು ಹೆಚ್.ಡಿ.ದೇವೇಗೌಡರು ತಮ್ಮ ವಿರುದ್ಧ ದೂರು ದಾಖಲಿಸಿದ್ದರು ಎಂದು ಅನೇಕ ಸಂಧರ್ಭಗಳಲ್ಲಿ ಆರೋಪ ಮಾಡಿದ್ದರು. ಯಡಿಯೂರಪ್ಪನವರು ಈ ಆರೋಪವನ್ನು ಹಿಂದಕ್ಕೆ ಪಡೆಯುತ್ತಾರೆಯೇ?
    9. ಯಡಿಯೂರಪ್ಪನವರು ಪಾದಯಾತ್ರೆಯ ಉದ್ಘಾಟನೆಗೆ ತಮ್ಮ ಪ್ರಕರಣದ ದೂರುದಾರರಾದ ಬಾಲರಾಜ್ ಮತ್ತು ಶಿರಾಜಿನ್ ಭಾಷರವರನ್ನು ಜೊತೆಯಲ್ಲಿ ಕರೆದುಕೊಂಡು ಹೋಗಲು ತಮ್ಮ ಪಕ್ಷದ ಹೈ ಕಮಾಂಡ್ ನಿಂದ ಯಾವುದೇ ನಿರ್ಬಂಧ ಇತ್ತೇ?
    10. ಮೂಡ ಪ್ರಕರಣದಲ್ಲಿ ಪಾದಯಾತ್ರೆ ಉದ್ಘಾಟಿಸಿದ ಯಡಿಯೂರಪ್ಪನವರು ಬೆಂಗಳೂರು ದಕ್ಷಿಣ ತಾಲೂಕು, ಉತ್ತರಹಳ್ಳಿ ಹೋಬಳಿ ಬಿ. ಎಂ. ಕಾವಲು ಗ್ರಾಮದ ಸುಮಾರು 2500 ಎಕರೆ ಅಕ್ರಮ ಭೂಮಿ ಹಂಚಿಕೆ ಆರೋಪದ ಸಂಬಂಧ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ವಿರುದ್ಧ ತನಿಖೆಗೆ ಒತ್ತಾಯಿಸುವರೇ?

    ಯಡಿಯೂರಪ್ಪನವರು ಈ ರಾಜ್ಯದ ಒಬ್ಬ ಜನನಾಯಕರಾಗಿದ್ದು, ಸದನದ ಒಳಗಡೆ ಅವರು ಹೆಚ್.ಡಿ.ಕುಮಾರಸ್ವಾಮಿ ಮತ್ತು ಅವರ ಕುಟುಂಬದ ಮೇಲೆ ಆರೋಪಗಳನ್ನು ಮಾಡಿದ್ದು, ಇವುಗಳು ಅಧಿಕೃತ ದಾಖಲೆಗಳಾಗಿ ಉಳಿದುಕೊಂಡಿರುತ್ತವೆ. ಮಾನ್ಯ ಯಡಿಯೂರಪ್ಪನವರು ಸಾರ್ವಜನಿಕ ಹಿತದೃಷ್ಟಿಯಿಂದ ಮತ್ತು ಅವರ ನಾಯಕತ್ವಕ್ಕೆ ಅನುಗುಣವಾಗಿ ಮೇಲಿನ 10 ಪ್ರಶ್ನೆಗಳಿಗೆ ಉತ್ತರಿಸಬೇಕಿದೆ ಎಂದು ರಮೇಶ್ ಬಾಬು ಹೇಳಿದ್ದಾರೆ.

  • ಮುಡಾ ಹಗರಣ; ಇದೀಗ ರಾಜಭವನ-ಸರ್ಕಾರ ನಡುವೆ ಸಂಘರ್ಷ; ರಾಜ್ಯಪಾಲರ ಶೋಕಾಸ್ ನೊಟೀಸ್ ಹಿಂಪಡೆಯುವಂತೆ ಒತ್ತಾಯಿಸಲು ಸಂಪುಟ ತೀರ್ಮಾನ

    ಮುಡಾ ಹಗರಣ; ಇದೀಗ ರಾಜಭವನ-ಸರ್ಕಾರ ನಡುವೆ ಸಂಘರ್ಷ; ರಾಜ್ಯಪಾಲರ ಶೋಕಾಸ್ ನೊಟೀಸ್ ಹಿಂಪಡೆಯುವಂತೆ ಒತ್ತಾಯಿಸಲು ಸಂಪುಟ ತೀರ್ಮಾನ

    ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ವಿವಾದದ ಬಿರುಗಾಳಿ ಎಬ್ಬಿಸಿರುವ ಮುಡಾ ಹಗರಣ ವಿಚಾರದಲ್ಲಿ ಈವರೆಗೂ ಕಾಂಗ್ರೆಸ್-ಬಿಜೆಪಿ ನಡುವೆ ನಡೆಯುತ್ತಿದ್ದ ಸಂಘರ್ಷ ಇದೀಗ ರಾಜಭವನ-ಸರ್ಕಾರ ನಡುವಿನ ಕಲಹದತ್ತ ತಿರುಗಿದಂತಿದೆ.

    ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನ ಹಂಚಿಕೆ ಹಗರಣ ಕುರಿತಂತೆ ಪ್ರಾಸಿಕ್ಯೂಷನ್ ಅನುಮತಿ ಕೋರಿ ಸಲ್ಲಿಕೆಯಾಗಿರುವ ಅರ್ಜಿ ಹಿನ್ನೆಲೆ ರಾಜ್ಯಪಾಲರು ಸಿಎಂಗೆ ನೀಡಿರುವ ನೊಟೀಸ್ ಇದೀಗ ವಿದ್ಯಮಾನಗಳ ಕೇಂದ್ರಬಿಂದುವಾಗಿದ್ದು, ಈ ವಿಚಾರದಲ್ಲಿ ಇಂದು (ಆ.1) ನಡೆದ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಧಾರವೊಂದು ರಾಜಭವನ ಮತ್ತು ಸರ್ಕಾರದ ನಡುವಿನ ಸಂಘರ್ಷಕ್ಕೆ ಹಾದಿ ಮಾಡಿಕೊಟ್ಟಂತಿದೆ.

    ಅಷ್ಟಕ್ಕೂ ಸಂಪುಟದ ತೀರ್ಮಾನ ಏನು..?

    ರಾಜ್ಯಪಾಲರು ನೀಡಿರುವ ನೊಟೀಸ್ ಸಿದ್ದರಾಮಯ್ಯ ಅವರನ್ನು ಆತಂಕಕ್ಕೀಡು ಮಾಡಿದರೆ, ಆಡಳಿತರೂಢ ಕಾಂಗ್ರೆಸ್ ಪಕ್ಷಕ್ಕೂ ಮುಜುಗರದ ಪರಿಸ್ಥಿತಿಯನ್ನು ತಂದೊಡ್ಡಿದೆ. ಇಂದು ವೇಳೆ ರಾಜ್ಯಪಾಲರು ಸಿಎಂ ಸಿದ್ದರಾಮಯ್ಯ ವಿರುದ್ದ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದೇ ಆದಲ್ಲಿ ಮುಖ್ಯಮಂತ್ರಿ ರಾಜೀನಾಮೆ ನೀಡುವ ಪರಿಸ್ಥಿತಿಯೂ ಎದುರಾಗಬಹುದು. ಈ ಹಿನ್ನೆಲೆಯಲ್ಲಿ ಜಾಣ ನಡೆ ಅನುಸರಿಸಿರುವ ಸಿದ್ದರಾಮಯ್ಯ ಇಂದಿನ ಸಂಪುಟ ಸಭೆಯ ನಿರ್ಧಾರವನ್ನು ಉಪಮುಖ್ಯಮಂತ್ರಿ ಡಿ.ಕೆ‌.ಶಿವಕಮಾರ್ ಅವರಿಗೆ ಬಿಟ್ಟುಕೊಟ್ಟರು.

    ಡಿ.ಕೆ.ಶಿ.ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಎರಡು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಮುಡಾ ನಿವೇಶನ ಹಂಚಿಕೆ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾತ್ರವಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಪ್ರಾಸಿಕ್ಯೂಷನ್ ಅನುಮತಿ ಸಂಬಂಧ ರಾಜ್ಯಪಾಲರು ನೀಡಿರುವ ನೊಟೀಸ್​ ಹಿಂಪಡೆಯುವಂತೆ ಒತ್ತಾಯಿಸುವ ಹಾಗೂ ಈ ಬಗ್ಗೆ ಕಾನೂನು ಹೋರಾಟ ನಡೆಸಲು ಸಂಪುಟ ನಿರ್ಣಯ ಕೈಗೊಂಡಿತು.

    ಮೊಟ್ಟೆ ಹಗರಣಕ್ಕೆ ಸಂಬಂಧಿಸಿದಂತೆ ದೂರು ನೀಡಿ ಮೂರು ತಿಂಗಳಾದರೂ ರಾಜ್ಯಪಾಲರು ಕ್ರಮ ಕೈಗೊಂಡಿರಲಿಲ್ಲ. ಹಿಂದೆ ಬಿಜೆಪಿಯವರ ವಿರುದ್ದ ಖಾಸಗಿ ದೂರು ದಾಖಲಾದಾಗ ಪ್ರಾಸಿಕ್ಯುಷನ್‌ಗೂ ಅನುಮತಿ ನೀಡಿಲ್ಲ, ಶೋಕಾಸ್ ನೊಟೀಸ್ ಕೂಡ ನೀಡಿರಲಿಲ್ಲ. ಈ ಹಿಂದೆ ಬಿಜೆಪಿ ನಾಯಕರ ವಿರುದ್ದ ಅನೇಕ ದೂರುಗಳು ಸಲ್ಲಿಕೆಯಾಗಿದ್ದು, ಆ ದೂರುಗಳ ಬಗ್ಗೆ ರಾಜ್ಯಪಾಲರು ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ, ಈಗ ಮುಡಾ ಪ್ರಕರಣದಲ್ಲಿ ರಾಜ್ಯಪಾಲರು ಒತ್ತಡ ಹೇರುತ್ತಿರುವುದು ಸರಿಯಲ್ಲ ಎಂದು ಸಂಪುಟ ಸಭೆಯಲ್ಲಿ ಚರ್ಚೆ ನಡೆದಿದೆ.

    ಮುಡಾ ಪ್ರಕರಣದಲ್ಲಿ ರಾಜ್ಯಪಾಲರು ತರಾತುರಿಯಲ್ಲಿ ನೋಟೀಸ್ ನೀಡಿದ್ದಾರೆ. ಇದು ರಾಜಕೀಯ ಪ್ರೇರಿತವಾಗಿರುವುದರಿಂದ ಈ ನೊಟೀಸ್​ ಹಿಂಪಡೆಯುವಂತೆ ರಾಜ್ಯಪಾಲರನ್ನು ಒತ್ತಾಯಿಸಲು ಸಚಿವ ಸಂಪುಟ ನಿರ್ಧಾರಿಸಿದೆ.

    ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ರಾಜಣ್ಣ, 20 ವರ್ಷಗಳ ಹಿಂದೆಯೇ ಸಿಎಂ ಪತ್ನಿ ಕಾನೂನು ಪ್ರಕಾರವಾಗಿಯೇ ಮುಡಾ ಸೈಟ್​​ ಪಡೆದುಕೊಂಡಿದ್ದಾರೆ.ಯ ಹೀಗಿದ್ದರೂ ರಾಜಕೀಯ ಪ್ರೇರಿತವಾಗಿ ವಿವಾದ ಎಬ್ಬಿಸಲಾಗಿದೆ ಎಂದರು. ಈಗ ಗವರ್ನರ್ ಗೆಹ್ಲೋಟ್​ ಮುಂದೆ‌ ಎಷ್ಟು ಅರ್ಜಿಗಳು ಇವೆ?. ಇದು ರಾಜಕೀಯ ಪ್ರೇರಿತ ಹಾಗಾಗಿ ಸಂಪುಟ ಸಭೆಯಲ್ಲಿ ರಾಜ್ಯಪಾಲರ ನೊಟೀಸ್ ಹಿಂಪಡೆಯಲು ಒತ್ತಾಯಿಸುವ ತೀರ್ಮಾನಿಸಲಾಯಿತು ಎಂದು ತಿಳಿಸಿದರು.