Tag: Sashikala Jolle

  • ಶೋಕಾಸ್ ನೋಟಿಸಿಗೆ ಹೆದರಲ್ಲ; ರಾಜ್ಯಪಾಲರಿಗೆ ಸಿದ್ದು ಸವಾಲ್

    ಮೈಸೂರು: ರಾಜ್ಯ ರಾಜಕಾರಣದಲ್ಲಿ ಮುಡಾ ಹಗರಣ ಆಡಳಿತ ಪ್ರತಿಪಕ್ಷಗಳ ನಡುವೆ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ. ಮುಡಾ ಹಗರಣ ವಿಚಾರದಲ್ಲಿ ರಾಜಕೀಯ ಪಕ್ಷಗಳ ನಡುವೆ ಜಟಾಪಟಿ ಮುಂದಿರುವಂತೆಯೇ, ಈ ಹಗರಣ ಆರೋಪದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ಕೋರಿರುವ ಅರ್ಜಿ ಹಿನ್ನೆಲೆಯಲ್ಲಿ ರಾಜ್ಯಪಾಲರು ನೀಡಿರುವ ನೋಟಿಸ್ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.

    ಈ ನಡುವೆ ರಾಜ್ಯಪಾಲರು ಶೋಕಾಸ್ ನೀಡಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಸಿಎಂ ಸಿದ್ದರಾಮಯ್ಯ, ಇದಕ್ಕೆಲ್ಲ ನಾನು ಹೆದರಲ್ಲ. ಇದನ್ನೆಲ್ಲ ಎದುರಿಸಲು ಸಿದ್ಧರಾಗಿದ್ದೇವೆ‌ ಎಂದು ಪ್ರತಿಕ್ರಿಯಿಸಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ ಸಿಎಂ, ನಾನು 136 ಶಾಸಕರ ಬೆಂಬಲದಿಂದ ಮುಖ್ಯಮಂತ್ರಿ ಆಗಿರುವವನು. ತಪ್ಪು ಮಾಡಿದ್ದರೆ ತಾನೇ ಹೆದರುವುದು ಎಂದರು.

    ಮುಡಾ ಹಗರಣದಲ್ಲಿ ನನ್ನ ಪಾತ್ರ ಇಲ್ಲದಿದ್ದರೂ ಸರ್ಕಾರ ಅಸ್ಥಿರಗೊಳಿಸಲು ಯತ್ನಿಸಿದ್ದಾರೆ ಎಂದು ದೂರಿದ ಸಿದ್ದರಾಮಯ್ಯ, ರಾಜಭವನ ಹಾಗೂ ರಾಜ್ಯಪಾಲರ ಅಧಿಕಾರವನ್ನು ಬಿಜೆಪಿಯವರು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ದೂರಿದರು.

    ದೂರುದಾರ ಟಿ.ಜೆ. ಅಬ್ರಹ್ರಾಂ ನಡೆ ಬಗ್ಗೆ ಸಂಶಯ ವ್ಯಕ್ತಪಡಿಸಿದ ಸಿಎಂ ಸಿದ್ದರಾಮಯ್ಯ, ಜುಲೈ 26ರಂದು ಬೆಳಿಗ್ಗೆ 11.30ಕ್ಕೆ ಟಿ.ಜೆ. ಅಬ್ರಹ್ರಾಂ ನೀಡಿದ್ದು, ಆ ದಿನ ಸಂಜೆಯೇ ಶೋಕಾಸ್ ನೋಟಿಸ್ ರೆಡಿ ಇದೆ ಬಂದು ಪಡೆದುಕೊಳ್ಳಿ ಎಂದು ನಮ್ಮ ಅಧಿಕಾರಿ ಎಲ್​ಕೆ ಅತೀಕ್​​ಗೆ ಹೇಳುತ್ತಾರೆ ಎಂದು ಬೆಳವಣಿಗೆ ಬಗ್ಗೆ ತಮ್ಮದೇ ದಾಟಿಯಲ್ಲಿ ವಿಶ್ಲೇಷಣೆ ಮಾಡಿದ್ದಾರೆ. ಬಿಜೆಪಿ ನಾಯಕರಾದ ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ, ಜರ್ನಾರ್ಧನ ರೆಡ್ಡಿ ವಿರುದ್ಧದ ದೂರು ಬಗ್ಗೆ ಈವರೆಗೂ ಶೋಕಾಸ್ ನೋಟಿಸ್ ನೀಡದ ರಾಜ್ಯಪಾಲರು ನನಗೆ ಮಾತ್ರ ಯಾಕೆ ತರಾತುರಿಯಲ್ಲಿ ನೋಟಿಸ್ ಕೊಟ್ಟಿದ್ದಾರೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿರುವ ವೈಖರಿಯೂ ಚರ್ಚೆಗೆ ಎಡೆಮಾಡಿಕೊಟ್ಟಿದೆ.