Tag: Shankar Gowda Patil

  • ಮಹಾರಾಷ್ಟ್ರ ರಣಾಂಗಣದಲ್ಲಿ ‘ಮಹಾಯುತಿ’ ಪ್ರಚಾರದಬ್ಬರ; ಯುವಸೈನ್ಯಕ್ಕೆ ‘ರವಿ ಮೋಡಿ’ಯೇ ಅಸ್ತ್ರ

    ಮುಂಬೈ: ಇಡೀ ದೇಶದ ಗಮನಸೆಳೆದಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಅಖಾಡದಲ್ಲಿ ರಾಜಕೀಯ ಪಕ್ಷಗಳ ಪ್ರಚಾರದ ಅಬ್ಬರ ಜೋರಾಗಿದೆ. ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ-ಶಿವಸೇನೆ ಮಿತ್ರಪಕ್ಷಗಳು ಶತಪ್ರಯತ್ನದಲ್ಲಿದ್ದು, ಪ್ರತಿಪಕ್ಷಗಳಾದ ಕಾಂಗ್ರೆಸ್-ಶಿವಸೇನೆ ಸಹಿತ ಅಘಾಡಿ ಮೈತ್ರಿ ಸೈನ್ಯ ಹರಸಾಹಸದಲ್ಲಿ ನಿರತವಾಗಿದೆ.

    ಬಿಜೆಪಿ ಹಾಗೂ ಮಿತ್ರಪಕ್ಷಗಳ (ಮಹಾಯುತಿ) ಅಭ್ಯರ್ಥಿಗಳ ಪರವಾಗಿ ಮಹಾರಾಷ್ಟ್ರ ಪ್ರದೇಶ ಬಿಜೆಪಿ ಮಾಜಿ ಉಸ್ತುವಾರಿ ನಾಯಕ ಕರ್ನಾಟಕಡಾ ಶಾಸಕ ಸಿ.ಟಿ.ರವಿ ಭಾರೀ ಪ್ರಚಾರ ಕೈಗೊಂಡಿದ್ದಾರೆ. ಕಳೆದ ಹಲವು ದಿನಗಳಿಂದ ಚುನಾವಣಾ ಅಖಾಡದಲ್ಲಿ ಮೊಕ್ಕಂ ಹೂಡಿರುವ ಸಿ.ಟಿ.ರವಿ ಹಲವು ಪ್ರಚಾರ ಸಮಾವೇಶದಲ್ಲಿ ಭಾಗವಹಿಸಿ ಮತಬೇಟೆ ಕೈಗೊಂಡಿದ್ದಾರೆ.

    ಪಶ್ಚಿಮ ಮಹಾರಾಷ್ಟ್ರದ ಚುನಾವಣಾ ಉಸ್ತುವಾರಿಯಾಗಿರುವ ಸಿ.ಟಿ.ರವಿಯಿಂದ ಮಹಾಯುತಿ ಅಭ್ಯರ್ಥಿಗಳ ಗೆಲುವಿಗಾಗಿ ತಮ್ಮದೇ ಶೈಲಿಯಲ್ಲಿ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ವರ್ಷದ ಹಿಂದೆ ಪ್ರದೇಶ ಬಿಜೆಪಿ ಉಸ್ತುವಾರಿಯಾಗಿದ್ದ ಸಂದರ್ಭದಲ್ಲಿ ಸಂಘಟನಾ ಚತುರನಾಗಿ ಕಾರ್ಯನಿರ್ವಹಿಸಿದ್ದ ಸಿ.ಟಿ.ರವಿ ಅವರಿಗೆ ಮಹಾರಾಷ್ಟ್ರ ರಾಜಕಾರಣದ ವಾಸ್ತವ ಚಿತ್ರಣ ತಿಳಿದಿರುವುದರಿಂದಾಗಿ ಯುವಜನರನ್ನು ಸಂಘಟಿಸುವಲ್ಲೂ ಯಶಸ್ವಿಯಾಗಿದ್ದಾರೆ.

    ಈ ನಡುವೆ, ಶನಿವಾರ ಮಹಾರಾಷ್ಟ್ರದ ಪಿಂಪ್ರಿ – ಚಿಂಚ್ವಾಡದಲ್ಲಿ ‘ಹಿಂದೂ ವೀರಶೈವ ಲಿಂಗಾಯತ್ ಮಂಚ್’ ಹಾಗೂ ‘ಜಂಗಮ ಸಮಾಜ’ ಆಯೋಜಿಸಿದ ‘ಸ್ನೇಹ ಮೇಳಾವ್’ ಕಾರ್ಯಕ್ರಮದಲ್ಲಿ ಸಿ.ಟಿ.ರವಿ ಭಾಷಣ ಗಮನಸೆಳೆಯಿತು. ಯಥಾ ಪ್ರಕಾರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಮಹಾರಾಷ್ಟ್ರದಲ್ಲಿ ಕೈ ನಾಯಕರ ಸುಳ್ಳುಗಳ ಭರವಸೆ ಫಲ ನೀಡಲ್ಲ ಎಂದರು. ಮಹಾರಾಷ್ಟ್ರದಲ್ಲಿ ಬಿಜೆಪಿ ಮೈತ್ರಿ ಪಕ್ಷಗಳ ಬಗ್ಗೆ ಜನರಿಗೆ ನಂಬಿಕೆ ಬಲವಾಗಿದ್ದು, ಮರಳಿ ಅಧಿಕಾರಕ್ಕೆ ಬರುವುದರಲ್ಲಿ ಸಂಶಯ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಮಾಜ ಬಾಂಧವರನ್ನು ಉದ್ದೇಶಿಸಿ ಮಾತನಾಡಿ ಅವರು, ನಾವು ಅಂಗಾಂಗ ಭಾವದಿಂದ ಸಮಾಜದಲ್ಲಿ ಜೊತೆಯಾಗಿ ಸಮಾಜ ಕಟ್ಟೋಣ, ರಾಷ್ಟ್ರ ಭಾವವನ್ನು ಮರೆಯದೆ, ರಾಷ್ಟ್ರಹಿತಕ್ಕೆ ಮತದಾನ ಮಾಡಿ ಎಂದು ಮನವಿ ಮಾಡಿದರು.

    ಕರ್ನಾಟಕ ಸರ್ಕಾರದ ಮಾಜಿ ದೆಹಲಿ ಪ್ರತಿನಿಧಿ ಶಂಕರ್ ಗೌಡ ಪಾಟೀಲ್ , ಸಮುದಾಯದ ಮುಖಂಡರಾದ ನಾರಾಯಣ ಭೈರವಾಡೆ, ಡಾ ರಾಜೇಂದ್ರ ಹಿರೇಮಠ್, ಎಸ್.ಬಿ.ಪಾಟೀಲ್, ಗುರುರಾಜ್ ಚರಂತಿಮಠ ಸೇರಿದಂತೆ ಹಿಂದೂ ಲಿಂಗಾಯತ ವೀರಶೈವ ಸಮಾಜ ಭಾಂದವರು, ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.