
ಬೆಂಗಳೂರು: ವಿಜಯ್ ಅವರಿಗೆ ಸರ್ಕಾರ ರಚನೆ ಮಾಡಿ ಬಹುಮತ ಸಾಬೀತುಪಡಿಸುವುದನ್ನು ತಡೆಯಲು ತಮಿಳುನಾಡಿನ ಗೌರವಾನ್ವಿತ ರಾಜ್ಯಪಾಲರಿಗೆ ಯಾವುದೇ ರೀತಿಯ ಅಧಿಕಾರವಿಲ್ಲ. ರಾಜ್ಯಪಾಲರ ನಡೆ ಸರಿಯಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿರುವ ಶಿವಕುಮಾರ್, ಟಿವಿಕೆ ಪಕ್ಷಕ್ಕೆ ತಮಿಳುನಾಡು ರಾಜ್ಯಪಾಲರು ಬಹುಮತ ಸಾಬೀತಿಗೆ ಅವಕಾಶ ನೀಡದೇ ಇರುವ ಬಗ್ಗೆ ಕೇಳಿದಾಗ, “ರಾಜ್ಯಪಾಲರು ಸರ್ಕಾರ ರಚನೆಗೆ ಅವಕಾಶ ನೀಡಬೇಕು. ಕರ್ನಾಟಕದಲ್ಲಿ ಯಡಿಯೂರಪ್ಪ ಅವರಿಗೆ ರಾಜ್ಯಪಾಲರು ಅನುಮತಿ ನೀಡಿದ್ದರು. ಹೆಚ್ಚು ಸ್ಥಾನ ಗಳಿಸಿದ ಪಕ್ಷಗಳಿಗೆ ಸರ್ಕಾರ ರಚಿಸಲು ಈ ಹಿಂದೆಯೂ ಅನುಮತಿ ನೀಡಲಾಗಿತ್ತು. ರಾಷ್ಟ್ರಪತಿಗಳಾಗಿದ್ದ ನಾರಾಯಣನ್, ಅಬ್ದುಲ್ ಕಲಾಂ ಅವರೂ ಈ ರೀತಿ ಮಾಡಿದ್ದರು. ವಾಜಪೇಯಿ ಅವರಿಗೂ ಸಹ ಇದೇ ರೀತಿ ಸರ್ಕಾರ ರಚಿಸಲು ಅನುಮತಿ ನೀಡಿ ಸದನದಲ್ಲಿ ಬಹುಮತ ಸಾಬೀತಿಗೆ ಅವಕಾಶ ನೀಡಲಾಗಿತ್ತು. ಆದರೆ ಈಗ ಟಿವಿಕೆಗೆ ಅವಕಾಶ ನೀಡದಿರುವುದು ತಪ್ಪು” ಎಂದರು.
“ಮೊದಲು ಬಹುಮತ ಸಾಬೀತಿಗೆ ಅವಕಾಶ ನೀಡಬೇಕು. ಒಂದು ರಾಜ್ಯದ ಜನರ ಭಾವನೆಗಳಿಗೆ ಬೆಲೆ ಕೊಡಬೇಕು. ಇದು ಪ್ರಜಾಪ್ರಭುತ್ವ. ಒಂದು ಮತದಿಂದ ಬಹುಮತ ಬರಬಹುದು ಅಥವಾ ಕಳೆದುಕೊಳ್ಳಬಹುದು. ವಾಜಪೇಯಿ ಅವರಿಗೆ ಇದೇ ರೀತಿ ಆಗಲಿಲ್ಲವೇ? ಒಂದೊಮ್ಮೆ ಬಹುಮತ ಸಾಬೀತು ಆಗದೇ ಹೋದರೆ ಮುಂದಿನ ಆಯ್ಕೆ ನೋಡಬಹುದು” ಎಂದರು.
