Friday, May 8

‘ಬಹುಮತದ ಲೆಕ್ಕ ಕೇಳಿರುವ ತಮಿಳುನಾಡು ರಾಜ್ಯಪಾಲರ ಕ್ರಮ ಸರಿ ಇದೆ’: ಸುಪ್ರೀಂ ಕೋರ್ಟ್ ವಕೀಲ ಕೆ.ವಿ. ಧನಂಜಯ

ನವದೆಹಲಿ: ತಮಿಳುನಾಡು ವಿಧಾನಸಭೆ ಚುನಾವಣೆಯ ನಂತರ ಉಂಟಾದ ರಾಜಕೀಯ ಅಚಲ ಸ್ಥಿತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ವಕೀಲ ಕೆ.ವಿ. ಧನಂಜಯ ಪ್ರಮುಖ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಹುಮತದ ಸ್ಪಷ್ಟ ಆಧಾರ ಸಾಬೀತುಪಡಿಸಿದ ನಂತರವೇ ಸರ್ಕಾರ ರಚಿಸಲು ಆಹ್ವಾನ ನೀಡಬೇಕು ಎಂಬುದು ರಾಜ್ಯಪಾಲರ ನಿಲುವು—ಅದು ಸಾಂವಿಧಾನಿಕವಾಗಿ ಸಂಪೂರ್ಣ ಸರಿಯೇ ಎಂದು ಅವರು ಹೇಳಿದ್ದಾರೆ.

ಈ ಬಾರಿ ಚುನಾವಣೆಯಲ್ಲಿ ತಮಿಳುನಾಡು ಅತಂತ್ರ ಸ್ಥಿತಿ ಸೃಷ್ಟಿಯಾಗಿದೆ. 234 ಸ್ಥಾನಗಳಿರುವ ವಿಧಾನಸಭೆಯಲ್ಲಿ ಬಹುಮತಕ್ಕೆ 118 ಸ್ಥಾನಗಳ ಅಗತ್ಯ. ಫಲಿತಾಂಶ ಪ್ರಕಾರ, ಟಿವಿಕೆ (Tamilaga Vettri Kazhagam) 108 ಸ್ಥಾನಗಳೊಂದಿಗೆ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಡಿಎಂಕೆ 59, ಎಐಎಡಿಎಂಕೆ 47, ಕಾಂಗ್ರೆಸ್ 5 ಹಾಗೂ ಇತರೆ ಪಕ್ಷಗಳು ಉಳಿದ ಸ್ಥಾನಗಳನ್ನು ಗೆದ್ದಿವೆ.

ಕಾಂಗ್ರೆಸ್ 5 ಸ್ಥಾನಗಳ ಬೆಂಬಲ ಸೇರಿದ್ದರೂ, ಟಿವಿಕೆ ಸಂಖ್ಯೆ 113 ಮಾತ್ರ—ಇದು ಬಹುಮತಕ್ಕೆ ಬೇಕಾದ ಸಂಖ್ಯೆಗೆ ತಲುಪುವುದಿಲ್ಲ. ನಟ ಸಿ. ಜೋಸೆಫ್ ವಿಜಯ್ ಎರಡು ಕ್ಷೇತ್ರಗಳಲ್ಲಿ ಗೆದ್ದಿರುವುದರಿಂದ ಒಂದು ಸ್ಥಾನ ರಾಜೀನಾಮೆ ನೀಡಬೇಕಾಗುತ್ತದೆ, ಇದರಿಂದ ಟಿವಿಕೆ ಶಕ್ತಿ 107ಕ್ಕೆ ಇಳಿಯುತ್ತದೆ. ಕಾಂಗ್ರೆಸ್ ಬೆಂಬಲ ಸೇರಿ ಒಟ್ಟು 112 ಆಗುತ್ತದೆ. ಇದು 233 ಸದಸ್ಯರ ಸದನದಲ್ಲೂ ಬಹುಮತಕ್ಕೆ ಬೇಕಾದ 117 ಸಂಖ್ಯೆಗೆ ತಲುಪುವುದಿಲ್ಲ.

“ರಾಜ್ಯಪಾಲರು ನಿರೀಕ್ಷೆ, ಊಹೆ, ಖಾಸಗಿ ಮಾತುಕತೆ ಅಥವಾ ರಾಜಕೀಯ ಆಸೆ ಆಧಾರದಿಂದ ಕೆಲಸ ಮಾಡಲು ಸಾಧ್ಯವಿಲ್ಲ,” ಎಂದು ಧನಂಜಯ ಅವರು ಪ್ರತಿಪಾದಿಸಿದ್ದಾರೆ.

ಬಹುಮತ ಪರೀಕ್ಷೆಗೆ ಫ್ಲೋರ್ ಟೆಸ್ಟ್ ಸೂಕ್ತ ವಿಧಾನವೆಂಬುದು ಸತ್ಯವಾದರೂ, ಮೊದಲು ವಿಶ್ವಾಸಾರ್ಹ ಬಹುಮತದ ಆಧಾರ ಸಲ್ಲಿಸಲು ನಾಯಕನಿಂದಲೇ ಬರಬೇಕು ಎಂದು ವಕೀಲರಾದ ಧನಂಜಯ್ ಹೇಳಿದ್ದಾರೆ. “ಮೊದಲು ಪ್ರಮಾಣವಚನ ಮಾಡಿ, ನಂತರ ಸಂಖ್ಯೆಯ ಹುಡುಕಾಟ—ಇದು ಸಂವಿಧಾನ ನೀಡಿರುವ ಮಾರ್ಗವಲ್ಲ,” ಎಂದು ಅವರು ಹೇಳಿದ್ದಾರೆ.

ತಮಿಳುನಾಡಿನಲ್ಲಿ ಎಲ್ಲಾ ಪಕ್ಷಗಳೂ ಚುನಾವಣಾ ಪೂರ್ವ (pre-poll) ಮೈತ್ರಿಗಳಲ್ಲೇ ಸ್ಪರ್ಧಿಸಿರುವುದರಿಂದ, ಸ್ವತಂತ್ರ ಸದಸ್ಯರು ಅಥವಾ ಅತಿದೊಡ್ಡ ಪಕ್ಷಕ್ಕೆ ತೆರಳಬಹುದಾದ ‘ಫ್ರಿ ಫ್ಲೋಟ್’ ಶಾಸಕರೇ ಇಲ್ಲದ ಪರಿಸ್ಥಿತಿ ಉಂಟಾಗಿದೆ. ಇಂತಹ ಸಂದರ್ಭದಲ್ಲಿ, ಇತರ ಪಕ್ಷಗಳಿಂದ ಬರುವ ಯಾವುದೇ ಬೆಂಬಲವೂ ಬರಹದಲ್ಲಿ ಸ್ಪಷ್ಟವಾಗಿ, ರಾಜ್ಯಪಾಲರಿಗೆ ಸಲ್ಲಿಸಲೇಬೇಕು ಎಂದು ಅವರು ರಾಜಕೀಯ ಚರ್ಚೆಯಲ್ಲಿ ಕಾನೂನಿನ ಅವಶ್ಯಕತೆಯನ್ನು ತುಂಬಿದ್ದಾರೆ.

‘ವಿಜಯ್ ನೇತೃತ್ವದ ಟಿವಿಕೆಯ ಸಾಧನೆ ಐತಿಹಾಸಿಕ. ಆದರೆ ಸರ್ಕಾರ ರಚಿಸಲು ಆಹ್ವಾನ ನೀಡುವ ಪ್ರಶ್ನೆ—ಅವರ ಬಳಿ ಸದನದ ವಿಶ್ವಾಸವಿದೆಯೇ ಎಂಬುದರ ಮೇಲೆ ಮಾತ್ರ ನಿಂತಿದೆ,” ಎಂದು ಕೆ.ವಿ. ಧನಂಜಯ್ ಬೊಟ್ಟು ಮಾಡಿದ್ದಾರೆ.

ರಾಜ್ಯಪಾಲರು ತೆಗೆದುಕೊಂಡಿರುವ ಎಚ್ಚರಿಕೆಯ ಕ್ರಮವನ್ನು ಸಂವಿಧಾನಬದ್ಧ ಮತ್ತು ಸಮಂಜಸ ಎಂದು ಅವರು ಅಭಿಪ್ರಾಯ ಮುಂದಿಟ್ಟಿದ್ದಾರೆ.