Friday, May 15

‘ಇಂಡಿಯಾ’ದಲ್ಲಿ ತಳಮಳ? ಹೊಸ ರಾಜಕೀಯ ಮೈತ್ರಿಗೆ ತಮಿಳುನಾಡಿನಲ್ಲಿ ಮುನ್ನುಡಿ?

ಚೆನ್ನೈ: ತಮಿಳುನಾಡು ಬೆಳವಣಿಗೆಯು ಇಡೀ ದೇಶದ ರಾಜಕೀಯ ಚಿತ್ರಣವನ್ನೇ ಬದಲಾಯಿಸುವ ಸಾಧ್ಯತೆ ಬಗ್ಗೆ ಸುಳಿವು ನೀಡಿದೆ.
ದೀರ್ಘಕಾಲದ ಮೈತ್ರಿ ಪಕ್ಷವಾಗಿದ್ದ ಕಾಂಗ್ರೆಸ್ ವಿರುದ್ಧ ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಆಕ್ರೋಶ ವ್ಯಕ್ತಪಡಿಸಿರುವ ವೈಖರಿ ಹಾಗೂ TVK ವಿಜಯ್ ಪ್ರಮಾಣವಚನದಲ್ಲಿ ರಾಹುಲ್ ಉಪಸ್ಥಿತಿ ತೀರ್ಮಾನವು ಹೊಸ ಮೈತ್ರಿಯ ಸೂಚನೆ ನೀಡುತ್ತಿದೆ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸಿದ್ದಾರೆ.

ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ದಿನವೇ ಕಾಂಗ್ರೆಸ್ ತನ್ನ ಪಕ್ಷದೊಂದಿಗಿನ ಸಂಬಂಧ ಕಡಿದುಕೊಂಡದ್ದು ಸೌಜನ್ಯವಲ್ಲ ಎಂದು ಸ್ಟಾಲಿನ್ ಅವರು ಟೀಕಿಸಿದ್ದಾರೆ. ಮೈತ್ರಿಕೂಟದ ಬೆಂಬಲದಿಂದ ಗೆದ್ದ ಕಾಂಗ್ರೆಸ್ ಶಾಸಕರು ಕನಿಷ್ಠ ಧನ್ಯವಾದ ಸಲ್ಲಿಸಲು ಪಕ್ಷದ ಪ್ರಧಾನ ಕಚೇರಿಗೆ ಬರದಿರುವುದು ನೋವು ತಂದಿದೆ ಎಂದು ಅವರು ಹೇಳಿದ್ದಾರೆ.

ತಮಿಳರ ಹಕ್ಕು ಮತ್ತು ಕಲ್ಯಾಣಕ್ಕಾಗಿ ಡಿಎಂಕೆ ಜೊತೆ ಹೋರಾಟ ಮುಂದುವರಿಸುವುದಾಗಿ ಘೋಷಿಸಿರುವ ಕಮ್ಯುನಿಸ್ಟ್ ಪಕ್ಷಗಳು ಹಾಗೂ ವಿಸಿಕೆ ಪಕ್ಷದ ನಿಲುವಿಗೆ ಸ್ಟಾಲಿನ್ ಪ್ರಶಂಸೆ ನೀಡಿದ್ದಾರೆ. “ಫಲಿತಾಂಶಗಳು ಯಾರಿಗೂ ಸಂಪೂರ್ಣ ಬಹುಮತ ನೀಡದ ಸ್ಥಿತಿ ಉಂಟುಮಾಡಿವೆ. ಹೊಸ ಸರ್ಕಾರ ರಚನೆಗೆ ನಾವು ಅಡ್ಡಿಯಾಗುವುದಿಲ್ಲ. ಡಿಎಂಕೆ ರಚನಾತ್ಮಕ ವಿರೋಧ ಪಕ್ಷವಾಗಿರಲಿದೆ” ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.

ಸರ್ಕಾರ ರಚಿಸಲು ವಿಜಯ್ ನೇತೃತ್ವದ TVKಗೆ ಸಿಪಿಐ, ಸಿಪಿಐ(ಎಂ) ಮತ್ತು ವಿಸಿಕೆ ಬೆಂಬಲಿಸಿದರೂ ಅವರು ಡಿಎಂಕೆ ಮೈತ್ರಿಯಲ್ಲೇ ಮುಂದುವರಿಯುವುದಾಗಿ ಘೋಷಿಸಿರುವುದು ಸಂತೋಷ ತಂದಿದೆ ಎಂದು ಸ್ಟಾಲಿನ್ ಅಭಿಪ್ರಾಯಪಟ್ಟಿದ್ದಾರೆ.

ಇನ್ನೊಂದೆಡೆ, ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟದ ಪುನರ್ ರಚನೆ ಕುರಿತ ಚರ್ಚೆಗಳು ಜೋರಾಗಿವೆ. ಪಶ್ಚಿಮ ಬಂಗಾಳದಲ್ಲಿ ಟಿಎಂಕೆ ಎದುರಿಸಿದ ಸೋಲು ಮತ್ತು ತಮಿಳುನಾಡಿನಲ್ಲಿ ಡಿಎಂಕೆ ಶಕ್ತಿ ಕುಂದಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಈಗ TVK ಜೊತೆ ರಾಜಕೀಯ ಹೊಂದಾಣಿಕೆ ಬೆಳೆಸುತ್ತಿರುವುದು ಗಮನಸೆಳೆದಿದೆ. ವಿಜಯ್ ಅವರ ಪ್ರಮಾಣವಚನ ಸಮಾರಂಭದಲ್ಲಿ ರಾಹುಲ್ ಗಾಂಧಿ ಪಾಲ್ಗೊಳ್ಳಲು ಒಲವು ತೋರುವುದು ಕೂಡಾ ಹೊಸ ರಾಜಕೀಯ ಮೈತ್ರಿಯ ಸೂಚನೆಯಾಗಬಹುದು ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಣೆಗಳು ನಡೆಯುತ್ತಿವೆ.