Saturday, May 9

ಕಾಂಗ್ರೆಸ್‌ ಪಕ್ಷ ಮತ್ತು ಭ್ರಷ್ಟಾಚಾರ ಒಂದೇ ನಾಣ್ಯದ ಎರಡು ಮುಖ’ ಎಂದ ಬಿಜೆಪಿ

ಬೆಂಗಳೂರು: ಬೇನಾಮಿ ಕಂಪನಿಗಳನ್ನು ಸೃಷ್ಟಿಸಿ ಅದರೊಂದಿಗೆ ವ್ಯವಹರಿಸಿ ಕೊನೆಗೆ ಸುಳ್ಳು ದಾಖಲೆ ಒದಗಿಸಿ ದೇಶದ ಸಂಪತ್ತನ್ನು ಲೂಟಿ ಹೊಡೆಯುವ ಸರಣಿ ಕೃತ್ಯಗಳನ್ನು ಕಾಂಗ್ರೆಸ್ ನಾಯಕರು ಮಾಡುತ್ತಲೇ ಬಂದಿದ್ದಾರೆ. ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ಸೋನಿಯಾ ಗಾಂಧಿ ಪರಿವಾರ ₹2 ಸಾವಿರ ಕೋಟಿ ಲೂಟಿ ಹೊಡೆಯಲು ಸಂಚು ರೂಪಿಸಿತ್ತು ಎಂದು ಬಿಜೆಪಿ ಆರೋಪಿಸಿದೆ.

ಕಾಂಗ್ರೆಸ್‌ ಪಕ್ಷ ಮತ್ತು ಭ್ರಷ್ಟಾಚಾರ ಒಂದೇ ನಾಣ್ಯದ ಎರಡು ಮುಖವಾಗಿದೆ ಎಂದು ಬಣ್ಣಿಸಿರಿವ ಬಿಜೆಪಿ ಸಾಮಾಜಿಕ ಮಾಧ್ಯಮ’X’ನಲ್ಲಿ ಹಾಕಿರುವ ಪೋಸ್ಟ್ ಗಮನಸೆಳೆದಿದೆ. ಕಾಂಗ್ರೆಸ್‌ ಪಕ್ಷವು ಭ್ರಷ್ಟಾಚಾರವನ್ನು ಬಿಡುವುದಿಲ್ಲ, ಭ್ರಷ್ಟಾಚಾರವು ಕಾಂಗ್ರೆಸ್‌ ಪಕ್ಷವನ್ನು ಬಿಡುತ್ತಿಲ್ಲ. ಅಧಿಕಾರ ದುರುಪಯೋಗದ ಕಾರಣದಿಂದಾಗಿ ಸೋನಿಯಾ ಕುಟುಂಬದ ಭ್ರಷ್ಟಾಚಾರಗಳು ಹೊರಬರುತ್ತಿರಲಿಲ್ಲ. ಕಾಂಗ್ರೆಸ್ಸಿನ ಸೋನಿಯಾ ಮೇನಿಯಾದ ವ್ಯಾಲಿಡಿಟಿ ಮುಗಿದ ಕಾರಣ ಈಗ ಎಲ್ಲವೂ ಬಯಲಾಗುತ್ತಿದೆ ಎಂದು ಬಿಜೆಪಿ ಟೀಕಿಸಿದೆ.

ತನಿಖಾ ಸಂಸ್ಥೆಗಳು ದಾಖಲೆಗಳ ಆಧಾರದಲ್ಲಿ ತನಿಖೆ ನಡೆಸಿ, ಚಾರ್ಜ್‌ ಶೀಟ್‌ ಸಲ್ಲಿದರೆ ಅದಕ್ಕೂ ಕಾಂಗ್ರೆಸ್‌ ಪಕ್ಷ ರಾಜಕೀಯದ ಲೇಪ ಮೆತ್ತುತ್ತಿದೆ. ಕಾಂಗ್ರೆಸ್‌ ನಾಯಕರಿಗೆ ತಾಕತ್ತಿದ್ದರೆ ನ್ಯಾಯಾಲಯದ ಮೂಲಕವೇ ಹೋರಾಡಲಿ, ಬೀದಿಗಳಿದು ಹೋರಾಡಿ ನ್ಯಾಯಾಂಗ ವ್ಯವಸ್ಥೆಯ ಹಾದಿ ತಪ್ಪಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ಹೇಳಿದೆ.