Wednesday, September 30

ಗ್ರಾಮೀಣ ಹಿನ್ನೆಲೆಯ ‘ಕಾಳಿ ಖೇತಿ’; ಭಯಾನಕ ಸನ್ನಿವೇಶಗಳ ಝಲಕ್‌

ಮುಂಬೈ: ಹಿರಿಯ ನಟ ಜಾಕಿ ಶ್ರಾಫ್ ಹಾಗೂ ಶರದ್ ಕೇಲ್ಕರ್ ಅಭಿನಯದ ಮುಂಬರುವ ಹಾರರ್ ಚಿತ್ರ ‘ಕಾಳಿ ಖೇತಿ’ ಅಕ್ಟೋಬರ್ 23, 2026ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಗ್ರಾಮೀಣ ಹಿನ್ನೆಲೆಯ ಕಥೆಯನ್ನು ಒಳಗೊಂಡಿರುವ ಚಿತ್ರದಲ್ಲಿ ನೇಹಾ ಸರ್ಗಮ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರತಂಡ ಮಂಗಳವಾರ ಅಧಿಕೃತವಾಗಿ ಬಿಡುಗಡೆಯ ದಿನಾಂಕ ಘೋಷಿಸುವುದರೊಂದಿಗೆ ಚಿತ್ರದ ಪೋಸ್ಟರ್‌ನ್ನೂ ಅನಾವರಣಗೊಳಿಸಿದೆ.

ಪೋಸ್ಟರ್‌ನಲ್ಲಿ ಚಿತ್ರದ ಭಯಾನಕ ವಾತಾವರಣದ ಝಲಕ್‌ ನೀಡಲಾಗಿದ್ದು, ಗ್ರಾಮೀಣ ಪರಿಸರವನ್ನು ವಿಭಿನ್ನ ರೀತಿಯಲ್ಲಿ ಚಿತ್ರಿಸುವ ಕುತೂಹಲ ಮೂಡಿಸಿದೆ.

‘ಕಾಳಿ ಖೇತಿ’ ಚಿತ್ರವನ್ನು ಬ್ಲ್ಯಾಕ್‌ಕ್ಯಾನ್ವಾಸ್ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ಸನಾ ಖಾನ್ ನಿರ್ಮಿಸಿದ್ದಾರೆ. ಹ್ಯಾರಿಸ್ ಇಮ್ತಿಯಾಜ್ ಖಾನ್ ಕಥೆ ಬರೆದು ನಿರ್ದೇಶಿಸಿದ್ದಾರೆ.

ಚಿತ್ರದ ಪರಿಕಲ್ಪನೆಯ ಕುರಿತು ಮಾತನಾಡಿರುವ ನಿರ್ದೇಶಕ ಹ್ಯಾರಿಸ್ ಇಮ್ತಿಯಾಜ್ ಖಾನ್, ಕೃಷಿ ಕ್ಷೇತ್ರವನ್ನು ಹಾರರ್ ದೃಷ್ಟಿಕೋನದಲ್ಲಿ ನೋಡುವ ಪ್ರಯತ್ನ ಇದಾಗಿದೆ. ಇಂತಹ ವಿಷಯವನ್ನು ತಾವು ಈ ಹಿಂದೆ ಕಂಡಿಲ್ಲ. ವಿಭಿನ್ನ ಹಾಗೂ ರೋಚಕ ಅನುಭವವನ್ನು ಪ್ರೇಕ್ಷಕರಿಗೆ ನೀಡುವ ಉದ್ದೇಶವಿದೆ ಎಂದು ಹೇಳಿದ್ದಾರೆ.