
ಬೆಂಗಳೂರು, ಸೆಪ್ಟೆಂಬರ್ 8: ಅರಣ್ಯ ನಿರ್ವಹಣೆ, ಜೀವವೈವಿಧ್ಯ ಸಂರಕ್ಷಣೆ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಕುರಿತು ಭಾರತ ಮತ್ತು ಜಪಾನ್ ಚರ್ಚಿಸಿವೆ.
ಬೆಂಗಳೂರಿನಲ್ಲಿ ಮಂಗಳವಾರ ನಡೆದ ಅರಣ್ಯಗಳ ಕುರಿತ 7ನೇ ಭಾರತ–ಜಪಾನ್ ಜಂಟಿ ಕಾರ್ಯಪಡೆ (JWG) ಸಭೆಯಲ್ಲಿ ಉಭಯ ದೇಶಗಳ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು. ಅರಣ್ಯ ಮತ್ತು ಪರಿಸರ ಸಂರಕ್ಷಣೆಯಲ್ಲಿ ಇದುವರೆಗೆ ನಡೆದ ಸಹಕಾರವನ್ನು ಪರಿಶೀಲಿಸಿ, ಮುಂದಿನ ದಿನಗಳಲ್ಲಿ ಕೈಗೊಳ್ಳಬಹುದಾದ ಹೊಸ ಸಹಯೋಗದ ಕ್ಷೇತ್ರಗಳ ಕುರಿತು ಚರ್ಚೆ ನಡೆಸಲಾಯಿತು.
ಭಾರತೀಯ ನಿಯೋಗದ ನೇತೃತ್ವವನ್ನು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಹೆಚ್ಚುವರಿ ಮಹಾನಿರ್ದೇಶಕ (ಅರಣ್ಯ) ರಮೇಶ್ ಕುಮಾರ್ ಪಾಂಡೆ ವಹಿಸಿದ್ದರು. ಜಪಾನ್ ನಿಯೋಗಕ್ಕೆ ಕೃಷಿ, ಅರಣ್ಯ ಮತ್ತು ಮೀನುಗಾರಿಕೆ ಸಚಿವಾಲಯದ ಅರಣ್ಯ ಸಂಸ್ಥೆಯ ಉಪ ಮಹಾನಿರ್ದೇಶಕ ಶಿಮಿಜು ಕೊಟಾರೊ ನೇತೃತ್ವ ವಹಿಸಿದ್ದರು.
ಅರಣ್ಯ ಪ್ರದೇಶಗಳ ಹೊರಗಿನ ಮರಗಳ (TOF) ಸಂಪನ್ಮೂಲಗಳ ನಿರ್ವಹಣೆ, ಅರಣ್ಯ ತಳಿಶಾಸ್ತ್ರ ಹಾಗೂ ಅರಣ್ಯ ದಾಸ್ತಾನು ಪ್ರಮುಖ ಚರ್ಚಾ ವಿಷಯಗಳಾಗಿದ್ದವು.

TOF ಅಡಿಯಲ್ಲಿ ಅರಣ್ಯ ಪ್ರದೇಶದ ಹೊರಗೆ ಬೆಳೆಯುವ ಮರಗಳ ಸಂಪನ್ಮೂಲಗಳ ಮೌಲ್ಯಮಾಪನ, ನಿರ್ವಹಣೆ ಹಾಗೂ ಆನುವಂಶಿಕ ಸುಧಾರಣೆ ಕುರಿತು ಅನುಭವ ವಿನಿಮಯ ನಡೆಯಿತು. ಅರಣ್ಯ ತಳಿಶಾಸ್ತ್ರ ಕ್ಷೇತ್ರದಲ್ಲಿ ಆನುವಂಶಿಕ ಸಂಪನ್ಮೂಲ ಸಂರಕ್ಷಣೆ, ಮರಗಳ ಸಂತಾನೋತ್ಪತ್ತಿ, ಸುಧಾರಿತ ನೆಟ್ಟ ವಸ್ತು ಹಾಗೂ ಜರ್ಮ್‌ಪ್ಲಾಸಂ ಸಂರಕ್ಷಣೆಗೆ ಒತ್ತು ನೀಡಲಾಯಿತು.
ಅರಣ್ಯ ದಾಸ್ತಾನು ಕ್ಷೇತ್ರದಲ್ಲಿ ಅರಣ್ಯ ಸಂಪನ್ಮೂಲಗಳ ಮೌಲ್ಯಮಾಪನ, ಜಿಯೋಸ್ಪೇಷಿಯಲ್ ತಂತ್ರಜ್ಞಾನ ಹಾಗೂ ಮೇಲ್ವಿಚಾರಣಾ ವ್ಯವಸ್ಥೆಗಳ ಬಳಕೆ ಕುರಿತು ಚರ್ಚಿಸಲಾಯಿತು.
2015ರ ಸಹಕಾರ ಜ್ಞಾಪಕ ಪತ್ರದ ಅಡಿಯಲ್ಲಿ 2027–2031ರ ಮಾರ್ಗಸೂಚಿಯನ್ನು ಎರಡೂ ದೇಶಗಳು ಅನುಮೋದಿಸಿವೆ. ಅರಣ್ಯ, ಜೀವವೈವಿಧ್ಯ ಸಂರಕ್ಷಣೆ, ಸಂಶೋಧನೆ ಹಾಗೂ ಸಾಮರ್ಥ್ಯ ವೃದ್ಧಿಯಲ್ಲಿ ಸಹಕಾರವನ್ನು ಮತ್ತಷ್ಟು ಗಾಢಗೊಳಿಸುವುದು ಇದರ ಉದ್ದೇಶವಾಗಿದೆ.
ಸಭೆಯ ಬಳಿಕ ನಿಯೋಗಗಳು ಬೆಂಗಳೂರಿನ ಇನ್ಸ್ಟಿಟ್ಯೂಟ್ ಆಫ್ ವುಡ್ ಸೈನ್ಸ್ ಅಂಡ್ ಟೆಕ್ನಾಲಜಿಗೆ ಭೇಟಿ ನೀಡಿ ಕರ್ನಾಟಕ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದವು.
ಸೆ.9ರಂದು ಮೈಸೂರಿನ ಶ್ರೀಗಂಧದ ಕೃಷಿ-ಅರಣ್ಯ ಸಾಕಣೆ ಕೇಂದ್ರಗಳು, ಶ್ರೀಗಂಧದ ಡಿಪೋ ಮತ್ತು ಸಂಸ್ಕರಣಾ ಘಟಕಗಳಿಗೆ ಭೇಟಿ ನೀಡಲಿರುವ ನಿಯೋಗಗಳು, ಸೆ.10ರಂದು ನಾಗರಹೊಳೆ ಹುಲಿ ಮೀಸಲು ಪ್ರದೇಶಕ್ಕೆ ತೆರಳಲಿವೆ. ಶ್ರೀಗಂಧ ಕೃಷಿ ಹಾಗೂ ವನ್ಯಜೀವಿ ಸಂರಕ್ಷಣಾ ಪದ್ಧತಿಗಳ ಕುರಿತು ಅನುಭವ ವಿನಿಮಯಕ್ಕೆ ಈ ಕ್ಷೇತ್ರ ಭೇಟಿಗಳು ನೆರವಾಗಲಿವೆ.
