Sunday, May 3

ಶೃಂಗೇರಿ ಅಂಚೆ ಮತ ಮರುಎಣಿಕೆ ಫಲಿತಾಂಶದತ್ತ ಚಿತ್ತ; ಯಾರಿಗೆ ಗೆಲುವು?

ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಪ್ರಕ್ರಿಯೆ ಭಾನುವಾರ ದಿನವಿಡೀ ನಡೆದಿದ್ದು, ಅಂತಿಮ ವರದಿ ಚುನಾವಣಾ ಆಯೋಗಕ್ಕೆ ಕಳುಹಿಸಲಾಗಿದೆ.

ಕರ್ನಾಟಕ ಹೈಕೋರ್ಟ್ ಆದೇಶದ ಮೇರೆಗೆ ಅಂಚೆ ಮತಪತ್ರಗಳ ಮರುಪರಿಶೀಲನೆ ನಡೆಸಲಾಗಿದೆ. ಎಣಿಕೆ ವೇಳೆ ಕೆಲವು ಮತಪತ್ರಗಳಲ್ಲಿ ‘ಡಬ್ಬಲ್ ಟಿಕ್’ ಕಂಡುಬಂದ ಹಿನ್ನೆಲೆ ತಿರಸ್ಕರಿಸಲಾಗಿದೆ. ಇದರಿಂದ ಫಲಿತಾಂಶದ ಅಂತಿಮ ಚಿತ್ರಣ ಬದಲಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಸಿಂಧು, ಅಸಿಂಧು ಮತ ಲೆಕ್ಕಚಾರ ಕೂಡ ನಡೆದಿದೆ. ಈ ವೇಳೆ ಅಂಚೆ ಮತಗಳ ಪತ್ರದಲ್ಲಿ ‘ಡಬ್ಬಲ್ ಟಿಕ್’ ಮಾಡಿರುವುದು ಕಂಡುಬಂದಿದೆ. ಈ ಕಾರಣಕ್ಕೆ 258 ಮತಗಳನ್ನು ತಿರಸ್ಕರಿಸಲಾಗಿದೆ. ಈ ಹಿಂದೆ 569 ಅಂಚೆ ಮತಗಳನ್ನು ಪಡೆದಿದ್ದ ರಾಜೇಗೌಡರ ಪಟ್ಟಿಯಿಂದ ಈಗ 255 ಮತಗಳು ಮರು ಎಣಿಕೆ ವೇಳೆ ಕಡಿತಗೊಂಡಿವೆ ಎನ್ನಲಾಗಿದೆ. ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಅವರಿಗೆ ಬಂದಿದ್ದ 692 ಅಂಚೆ ಮತಗಳಲ್ಲಿ ಕೇವಲ 2 ಮತಗಳು ಮಾತ್ರ ತಿರಸ್ಕೃತಗೊಂಡಿವೆ. ಮರು ಎಣಿಕೆಯಲ್ಲಿ ರಾಜೇಗೌಡರ 255 ಅಂಚೆ ಮತಗಳು ಕಡಿತಗೊಂಡಿರುವುದರಿಂದ, ಚುನಾವಣಾ ಫಲಿತಾಂಶದ ಅಂತಿಮ ಚಿತ್ರಣವು ಬದಲಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಪ್ರತಿಕ್ರಿಯಿಸಿ, ಸ್ಟ್ರಾಂಗ್ ರೂಂನಿಂದಲೇ ಗೊಂದಲ ಆರಂಭವಾಗಿದೆ ಎಂದು ಆರೋಪಿಸಿದರು. ಇವಿಎಂಗಳನ್ನು ಇರಿಸಿದ್ದ ಕೋಣೆಯಲ್ಲೂ ಅನಗತ್ಯ ಸಮಸ್ಯೆಗಳು ಉಂಟಾಗಿವೆ ಎಂದು ಅವರು ಹೇಳಿದ್ದಾರೆ. 22 ಟ್ರಂಕ್‌ಗಳನ್ನು ತೆರೆಯಲಾಗಿದ್ದು, ಬ್ಯಾಲೆಟ್‌ಗಳ ಎಣಿಕೆ ನಡೆದಿದೆ. ಡಿಕ್ಲರೇಶನ್ ಕೊರತೆಯಿಂದ ಕೆಲವು ಮತಗಳನ್ನು ಅಮಾನ್ಯಗೊಳಿಸಲಾಗಿದೆ ಎಂದರು.

ತಮ್ಮ ಲೆಕ್ಕಾಚಾರ ಪ್ರಕಾರ, ಮಾನ್ಯ ಮತಗಳನ್ನು ಪರಿಗಣಿಸಿದಾಗ ತಮಗೆ ಬಹುಮತ ಸಿಗುವ ಸಾಧ್ಯತೆ ಇದೆ ಎಂದು ಜೀವರಾಜ್ ಹೇಳಿದ್ದಾರೆ. ಈ ಅಂಕಿಅಂಶಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದು, ಅಂತಿಮ ನಿರ್ಧಾರಕ್ಕಾಗಿ ಕಾಯಲಾಗುತ್ತಿದೆ ಎಂದರು.

ಈ ನಡುವೆ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡ ಆಯ್ಕೆಯನ್ನು ಪ್ರಶ್ನಿಸಿ ಜೀವರಾಜ್ ಸಲ್ಲಿಸಿದ್ದ ಅರ್ಜಿಯೇ ಈ ಮರು ಎಣಿಕೆಗೆ ಕಾರಣವಾಗಿದೆ. 2023ರ ಚುನಾವಣೆಯಲ್ಲಿ ಕೇವಲ ಅಲ್ಪ ಅಂತರದಿಂದ ಸೋತಿರುವುದಾಗಿ ಹೇಳಿದ ಅವರು, ಅಂಚೆ ಮತ ಎಣಿಕೆಯಲ್ಲಿ ಲೋಪಗಳಾಗಿವೆ ಎಂದು ಆರೋಪಿಸಿದ್ದರು.

ಇನ್ನೊಂದೆಡೆ, ಕಾಂಗ್ರೆಸ್ ಮುಖಂಡರು ಮರುಎಣಿಕೆ ಪ್ರಕ್ರಿಯೆಯ ಮೇಲೆ ಅನುಮಾನ ವ್ಯಕ್ತಪಡಿಸಿದ್ದು, ಮತಪತ್ರಗಳಲ್ಲಿ ತಿದ್ದುಪಡಿ ನಡೆದಿದೆ ಎಂಬ ಆರೋಪ ಮಾಡುತ್ತಿದ್ದಾರೆ. ಆದರೆ ಚುನಾವಣಾಧಿಕಾರಿಗಳು ಎಲ್ಲಾ ಪ್ರಕ್ರಿಯೆಯೂ ನ್ಯಾಯಾಲಯದ ನಿರ್ದೇಶನ ಹಾಗೂ ನಿಯಮಾವಳಿಗಳ ಪ್ರಕಾರವೇ ನಡೆದಿದೆ ಎಂದು ಸ್ಪಷ್ಟಪಡಿಸಿದ್ದಾರೆ.