
ಬೆಂಗಳೂರು: ನಗರದ ಟೌನ್ ಹಾಲ್‌ನಲ್ಲಿ ಅಖಿಲ ಭಾರತ ವೀರಶೈವ–ಲಿಂಗಾಯಿತ ಮಹಾಸಭಾ (ರಿ) ರಾಷ್ಟ್ರೀಯ ಮಹಿಳಾ ಮತ್ತು ಯುವ ವಿಭಾಗಗಳ ಪದಗ್ರಹಣ ಸಮಾರಂಭ ಭಾನುವಾರ ವೈಭವವಾಗಿ ನಡೆಯಿತು.
ಪಟ್ಟದ ಶ್ರೀ ಡಾ. ಮಲಯಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಡಾ. ಶ್ರೀ ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮಿಗಳು, ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಹಾಸಭಾ ಅಧ್ಯಕ್ಷರೂ ಆಗಿರುವ ಸಚಿವ ಈಶ್ವರ ಬಿ. ಖಂಡ್ರೆ, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್, ಶರಣ ಪ್ರಕಾಶ ಪಾಟೀಲ್ ಸೇರಿದಂತೆ ಹಲವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಹಾನಗಲ್ ಕುಮಾರಸ್ವಾಮಿಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಪದಗ್ರಹಣಕ್ಕೆ ಚಾಲನೆ ನೀಡಲಾಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಮಲಯಶಾಂತಮುನಿ ದೇಶಿಕೇಂದ್ರ ಸ್ವಾಮೀಜಿ, ಸಮಾಜ ನಿರ್ಮಾಣದಲ್ಲಿ ಮಹಿಳೆಯರು ಮತ್ತು ಯುವಕರ ಪಾತ್ರ ಮಹತ್ವದ್ದಾಗಿದೆ ಎಂದರು. ಪ್ರತೀ ಮನೆಯಲ್ಲಿ ಒಬ್ಬ ಸಮಾಜಸೇವಕ ಇದ್ದರೆ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು. ವೀರಶೈವ–ಲಿಂಗಾಯಿತ ಧರ್ಮವು ಕಾಯಕ ಮತ್ತು ದಾಸೋಹದ ಮೌಲ್ಯಗಳನ್ನು ಸಾರುತ್ತದೆ ಎಂದು ವಿವರಿಸಿದರು.
ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಮಾತನಾಡಿ, ಸಮಾಜ ಸೇವೆ ಪ್ರದರ್ಶನಕ್ಕಾಗಿ ಅಲ್ಲ, ನಿಸ್ವಾರ್ಥವಾಗಿ ನಡೆಯಬೇಕು ಎಂದು ಹೇಳಿದರು. ವೀರಶೈವ ಧರ್ಮವು ಮಾನವೀಯತೆಯ ಸಂಕೇತವಾಗಿದ್ದು, ಲಿಂಗಧಾರಣೆ ಮತ್ತು ಗುರುಪರಂಪರೆ ಪ್ರಮುಖವಾಗಿವೆ ಎಂದು ಹೇಳಿದರು.
ಸಚಿವ ಈಶ್ವರ ಖಂಡ್ರೆ ಮಹಾಸಭೆಯ 123 ವರ್ಷಗಳ ಇತಿಹಾಸವನ್ನು ಉಲ್ಲೇಖಿಸಿ, ಸಮಾಜವನ್ನು ಒಗ್ಗೂಡಿಸುವಲ್ಲಿ ಸಂಘಟನೆಯ ಪಾತ್ರ ಮಹತ್ವದ್ದಾಗಿದೆ ಎಂದರು. ಬಸವಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣದ ಕುರಿತು ಮಾಹಿತಿ ನೀಡಿದರು.
ಜಗದೀಶ್ ಶೆಟ್ಟರ್ ಮಾತನಾಡಿ, ವೀರಶೈವ–ಲಿಂಗಾಯಿತ ಸಮುದಾಯ ಒಗ್ಗಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು. ಬಸವಣ್ಣರ ಸಮಾನತೆ ತತ್ವವನ್ನು ಅನುಸರಿಸುವುದು ಅವಶ್ಯಕ ಎಂದರು.
ಬಸವರಾಜ ಹೊರಟ್ಟಿ ಸಮಾಜದ ಒಳಪಂಗಡದ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಏಕತೆ ಸಾಧಿಸಬೇಕು ಎಂದು ಸಲಹೆ ನೀಡಿದರು. ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹಾಗೂ ಶರಣ ಪ್ರಕಾಶ ಪಾಟೀಲ್ ಕೂಡ ಸಮಾಜದ ಶಿಕ್ಷಣ, ಸಂಸ್ಕಾರ ಮತ್ತು ಧಾರ್ಮಿಕ ಮೌಲ್ಯಗಳ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಂಕರ ಬಿದರಿ, ವೀಣಾ ಕಾಶಪ್ಪನವರ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದರು. ಇದೇ ವೇಳೆ, ವೀಣಾ ಕಾಶಪ್ಪನವರ್ ಅವರನ್ನು ರಾಷ್ಟ್ರೀಯ ಮಹಿಳಾ ವಿಭಾಗದ ಅಧ್ಯಕ್ಷೆಯಾಗಿ ಮತ್ತು ವೆಂಕಟರೆಡ್ಡಿ ಪಾಟೀಲ್ ಅವರನ್ನು ರಾಷ್ಟ್ರೀಯ ಯುವ ಘಟಕದ ಅಧ್ಯಕ್ಷರಾಗಿ ಪದಗ್ರಹಣ ಮಾಡಿಸಲಾಯಿತು.
