
ನವದೆಹಲಿ: ಕಳೆದ 11 ವರ್ಷಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ತೆರಿಗೆಗಳ ಮೂಲಕ ಮೋದಿ ಸರ್ಕಾರ ₹43 ಲಕ್ಷ ಕೋಟಿ ಸಂಗ್ರಹಿಸಿದ್ದು, ಇದು ಜನರ ಮೇಲಿನ “ತೆರಿಗೆ ಸುಲಿಗೆ” ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಆರೋಪಿಸಿದ್ದಾರೆ.
ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ ಅವರು, 2014ರಲ್ಲಿ ಪೆಟ್ರೋಲ್ ಲೀಟರ್‌ಗೆ ₹71.41 ಮತ್ತು ಡೀಸೆಲ್ ₹56.71 ಇತ್ತು. ಆದರೆ ಇಂದು ದೆಹಲಿಯಲ್ಲಿ ಪೆಟ್ರೋಲ್ ₹102.92 ಹಾಗೂ ಡೀಸೆಲ್ ₹90.99ಕ್ಕೆ ತಲುಪಿದೆ ಎಂದು ಹೇಳಿದರು. 2014ರ ಕಚ್ಚಾ ತೈಲ ದರಗಳಿಗಿಂತ ಈಗ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಕಡಿಮೆ ಇದ್ದರೂ ಭಾರತದಲ್ಲಿ ಮಾತ್ರ ಬೆಲೆ ಏರಿಕೆಯಾಗಿರುವುದು “ಬಿಜೆಪಿಯ ಲೂಟಿ” ಎಂದು ಟೀಕಿಸಿದರು.
2014ರಿಂದ 2025ರವರೆಗೆ ಪೆಟ್ರೋಲ್ ಮೇಲೆ ಸರಾಸರಿ ₹21.60 ಹಾಗೂ ಡೀಸೆಲ್ ಮೇಲೆ ₹12.80 ಅಬಕಾರಿ ಸುಂಕ ವಿಧಿಸಲಾಗಿದೆ. ಇದರಿಂದ ಸಾಮಾನ್ಯ ಜನರು ಇಂಧನ ಬೆಲೆಯ ದೊಡ್ಡ ಭಾಗವನ್ನು ತೆರಿಗೆಯ ರೂಪದಲ್ಲಿ ಸರ್ಕಾರಕ್ಕೆ ಪಾವತಿಸುತ್ತಿದ್ದಾರೆ ಎಂದು ಹೇಳಿದರು.
ಮೋದಿ ಸರ್ಕಾರ 21 ಬಾರಿ ಅಬಕಾರಿ ಸುಂಕ ಪರಿಷ್ಕರಿಸಿದ್ದು, ಅದರಲ್ಲಿ 12 ಬಾರಿ ಹೆಚ್ಚಳ ಮಾಡಿದೆ. ಚುನಾವಣೆಗಳು ಮುಗಿದ ತಕ್ಷಣ ಇಂಧನ ದರ ಏರಿಸುವುದು ಬಿಜೆಪಿ ಸರ್ಕಾರದ “ಯೋಜಿತ ಕ್ರಮ” ಎಂದು ಸುರ್ಜೇವಾಲ ಆರೋಪಿಸಿದರು.
ಇದೀಗ ಪೆಟ್ರೋಲ್, ಡೀಸೆಲ್ ಜೊತೆಗೆ ಸಿಎನ್‌ಜಿ ದರವೂ ಪ್ರತಿ ಕೆಜಿಗೆ ₹2 ಏರಿಕೆಯಾಗಿದೆ. ಎಲ್‌ಪಿಜಿ ಸಿಲಿಂಡರ್ ಬೆಲೆ 2014ರಲ್ಲಿ ₹414 ಇದ್ದದ್ದು, 2026ರಲ್ಲಿ ₹915.5ಕ್ಕೆ ಏರಿದೆ. ವಾಣಿಜ್ಯ ಎಲ್‌ಪಿಜಿ ದರವೂ ಭಾರೀ ಏರಿಕೆ ಕಂಡಿದೆ ಎಂದು ಅವರು ಹೇಳಿದರು.
ಬೆಂಗಳೂರಿನಲ್ಲಿ 5 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆ ಮೇ 1ರಿಂದ ₹21.50 ಏರಿಕೆಯಾಗಿ ₹340ಕ್ಕೆ ತಲುಪಿದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.
