Wednesday, April 29

ಎಸ್‌ಸಿ ಒಳ ಮೀಸಲಾತಿ ಜಾರಿ ಬೆನ್ನಲ್ಲೇ 56,432 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್

ಬೆಂಗಳೂರು: ರಾಜ್ಯದಲ್ಲಿ ಪರಿಶಿಷ್ಟ ಜಾತಿ (SC) ಸಮುದಾಯಗಳಿಗೆ ಒಳ ಮೀಸಲಾತಿ ಜಾರಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿದ ಬೆನ್ನಲ್ಲೇ, 56,432 ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರಿಸಲು ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ (DPAR) ಆದೇಶ ಹೊರಡಿಸಿದೆ.

ಶುಕ್ರವಾರ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಜಾರಿಗೆ ತೀರ್ಮಾನ ಕೈಗೊಳ್ಳಲಾಗಿತ್ತು. ಅದರಂತೆ ಎಸ್‌ಸಿ ಸಮುದಾಯಕ್ಕೆ ನಿಗದಿಪಡಿಸಿದ 15% ಮೀಸಲಾತಿಯನ್ನು ‘ಎ’, ‘ಬಿ’, ‘ಸಿ’ ವರ್ಗಗಳಾಗಿ ವಿಭಜಿಸಿ ಕ್ರಮವಾಗಿ 5.25%, 5.25% ಮತ್ತು 4.5% ಮೀಸಲಾತಿ ನೀಡಲಾಗಿದೆ.

ಡಿಪಿಎಆರ್ ಅಧೀನ ಕಾರ್ಯದರ್ಶಿ ಹೊರಡಿಸಿದ ಆದೇಶದಲ್ಲಿ, ಕರ್ನಾಟಕ ಹೈಕೋರ್ಟ್ (Karnataka High Court) ಮಧ್ಯಂತರ ಆದೇಶದ ಅನುಸಾರವಾಗಿ ನೇಮಕಾತಿ ಮತ್ತು ಪ್ರವೇಶ ಪ್ರಕ್ರಿಯೆಗಳನ್ನು ಮುಂದುವರಿಸಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ. ಅಂತಿಮ ತೀರ್ಪಿಗೆ ಒಳಪಟ್ಟಂತೆ ಈ ಕ್ರಮ ಜಾರಿಯಾಗಲಿದೆ.

ವರ್ಗ ‘ಸಿ’ ಮೀಸಲಾತಿಯೊಳಗೆ, 20% ಹುದ್ದೆಗಳು ಎಸ್‌ಸಿ ಸಮುದಾಯದ 59 ಅತ್ಯಂತ ಹಿಂದುಳಿದ ಉಪಜಾತಿಗಳಿಗೆ ಮೀಸಲಿಡಲಾಗುತ್ತದೆ. ಅರ್ಹ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದರೆ, ಅದೇ ವರ್ಗದ ಇತರ ಸಮುದಾಯಗಳಿಂದ ಭರ್ತಿ ಮಾಡಲಾಗುತ್ತದೆ.

ಇದೇ ವೇಳೆ, 2025 ಸೆಪ್ಟೆಂಬರ್ 3ರಂದು ಹೊರಡಿಸಿದ್ದ ಹಳೆಯ ಒಳ ಮೀಸಲಾತಿ ಆದೇಶದಡಿ ಆರಂಭವಾದ ಎಲ್ಲಾ ನೇಮಕಾತಿ ಪ್ರಕ್ರಿಯೆಗಳನ್ನು ಸರ್ಕಾರ ಹಿಂಪಡೆಯಲು ಸೂಚಿಸಿದೆ. ಆ ಅಧಿಸೂಚನೆಗಳನ್ನು ರದ್ದುಪಡಿಸಿ, 2026 ಫೆಬ್ರವರಿ 27ರಂದು ಪ್ರಕಟಿಸಿದ ಹೊಸ ಮಾರ್ಗಸೂಚಿಗಳ ಪ್ರಕಾರ ಮರುಜಾರಿಗೆ ತರಲಾಗುತ್ತದೆ.

ಎಸ್‌ಸಿ-ಎಸ್‌ಟಿ ಸೇರಿ ಒಟ್ಟು 24% ಮೀಸಲಾತಿಗೆ ನ್ಯಾಯಾಲಯ ಒಪ್ಪಿಗೆ ನೀಡಿದಲ್ಲಿ, ಹೆಚ್ಚುವರಿ 6% ಹುದ್ದೆಗಳನ್ನು ಬ್ಯಾಕ್ಲಾಗ್ ಹುದ್ದೆಗಳಾಗಿ ಪರಿಗಣಿಸಿ ಭರ್ತಿ ಮಾಡುವುದಾಗಿ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ರಾಜ್ಯದ ವಿವಿಧ ಇಲಾಖೆಗಳಲ್ಲಿರುವ 56,432 ಮಂಜೂರಾದ ಹುದ್ದೆಗಳ ನೇಮಕಾತಿಯನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸಲು ಸರ್ಕಾರ ಎಲ್ಲಾ ಇಲಾಖೆಗೆ ನಿರ್ದೇಶನ ನೀಡಿದೆ.