Friday, May 15

ಪೆಟ್ರೋಲ್, ಡೀಸೆಲ್ ದರ ಲೀಟರ್‌ಗೆ ₹3 ಏರಿಕೆ

ನವದೆಹಲಿ: ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಪ್ರತಿ ಲೀಟರ್‌ಗೆ ಸುಮಾರು ₹3ರಷ್ಟು ಹೆಚ್ಚಿಸಲಾಗಿದೆ. ತೈಲ ಕಂಪನಿಗಳು ಶುಕ್ರವಾರ ಬೆಳಗ್ಗೆ ಪರಿಷ್ಕೃತ ದರ ಪ್ರಕಟಿಸಿದ್ದು, ತಕ್ಷಣದಿಂದಲೇ ಜಾರಿಗೆ ಬಂದಿದೆ.

ದೆಹಲಿಯಲ್ಲಿ ಪೆಟ್ರೋಲ್ ದರ ₹94.77ರಿಂದ ₹97.77ಕ್ಕೆ ಏರಿಕೆಯಾಗಿದ್ದು, ಡೀಸೆಲ್ ₹87.67ರಿಂದ ₹90.67ಕ್ಕೆ ತಲುಪಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ₹102.90ರಿಂದ ₹106.17ಕ್ಕೆ ಏರಿಕೆಯಾದರೆ, ಡೀಸೆಲ್ ₹90.98ರಿಂದ ₹94.10ಕ್ಕೆ ಹೆಚ್ಚಳವಾಗಿದೆ.

ಕೋಲ್ಕತ್ತಾದಲ್ಲಿ ಪೆಟ್ರೋಲ್ ₹108.74 ಮತ್ತು ಡೀಸೆಲ್ ₹95.13ಕ್ಕೆ ತಲುಪಿದೆ. ಮುಂಬೈನಲ್ಲಿ ಪೆಟ್ರೋಲ್ ₹106.68 ಹಾಗೂ ಡೀಸೆಲ್ ₹93.14 ಆಗಿದೆ. ಚೆನ್ನೈನಲ್ಲಿ ಪೆಟ್ರೋಲ್ ₹103.67 ಮತ್ತು ಡೀಸೆಲ್ ₹95.25ಕ್ಕೆ ಏರಿಕೆಯಾಗಿದೆ.

ಮಧ್ಯಪ್ರಾಚ್ಯದ ಉದ್ವಿಗ್ನತೆ, ಕಚ್ಚಾ ತೈಲ ಬೆಲೆ ಏರಿಕೆ ಮತ್ತು ಜಾಗತಿಕ ಅನಿಶ್ಚಿತತೆ ನಡುವೆಯೂ ಭಾರತ ಇದುವರೆಗೆ ಇಂಧನ ದರ ಏರಿಕೆಯನ್ನು ತಪ್ಪಿಸಿತ್ತು. ಆದರೆ ಇದೀಗ ತೈಲ ಕಂಪನಿಗಳು ಬೆಲೆ ಹೆಚ್ಚಳ ಘೋಷಿಸಿವೆ.

ಕೆಲವು ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಇಂಧನ ಮಿತ ಬಳಕೆ ಹಾಗೂ ಚಿನ್ನ ಖರೀದಿ ನಿಯಂತ್ರಣಕ್ಕೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಈ ದರ ಏರಿಕೆ ರಾಜಕೀಯ ಚರ್ಚೆಗೆ ಕಾರಣವಾಗಿದೆ.