
ಮುಂಬೈ: ಜನಪ್ರಿಯ ವೆಬ್ ಸರಣಿ ‘ಮಿರ್ಜಾಪುರ್’ ಈಗ ಚಲನಚಿತ್ರ ರೂಪದಲ್ಲಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಪಂಕಜ್ ತ್ರಿಪಾಠಿ ಹಾಗೂ ಅಲಿ ಫಜಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ಮಿರ್ಜಾಪುರ್: ದಿ ಮೂವಿ’ ಚಿತ್ರವು ಸೆಪ್ಟೆಂಬರ್ 4ರಂದು ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕರು ಗುರುವಾರ ಪ್ರಕಟಿಸಿದ್ದಾರೆ.
ಚಿತ್ರ ನಿರ್ಮಾಣ ಸಂಸ್ಥೆ ಎಕ್ಸೆಲ್ ಎಂಟರ್‌ಟೈನ್‌ಮೆಂಟ್ ತನ್ನ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಚಿತ್ರದ ಪೋಸ್ಟರ್ ಹಂಚಿಕೊಂಡು ಬಿಡುಗಡೆ ದಿನಾಂಕವನ್ನು ಘೋಷಿಸಿದೆ.
‘ಮಿರ್ಜಾಪುರ್’ ಸರಣಿ ಉತ್ತರ ಪ್ರದೇಶದ ಪೂರ್ವಾಂಚಲ ಪ್ರದೇಶದ ಮಿರ್ಜಾಪುರ್ ಜಿಲ್ಲೆಯ ಅಪರಾಧ ಲೋಕವನ್ನು ಕೇಂದ್ರವಾಗಿಟ್ಟುಕೊಂಡಿದ್ದು, ಅಪರಾಧದ ದೊರೆ ಅಖಂಡಾನಂದ ‘ಕಾಲೀನ್’ ತ್ರಿಪಾಠಿ ಪಾತ್ರಕ್ಕೆ ಪಂಕಜ್ ತ್ರಿಪಾಠಿ ಜೀವ ತುಂಬಿದ್ದಾರೆ. ಅಲಿ ಫಜಲ್, ದಿವ್ಯೇಂದು ಶರ್ಮಾ, ಶ್ವೇತಾ ತ್ರಿಪಾಠಿ, ರಸಿಕಾ ದುಗಲ್ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
