Saturday, June 13

ಮೋದಿ ಮೇಲೆ ಅನಗತ್ಯ ಒತ್ತಡ ಹೇರಬೇಡಿ’; ಅಮೆರಿಕಕ್ಕೆ ಪುಟಿನ್ ಎಚ್ಚರಿಕೆ

ಮಾಸ್ಕೋ: ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಯಾವುದೇ ದೇಶ ಒತ್ತಡ ಹೇರುವುದು ಅಂತರರಾಷ್ಟ್ರೀಯ ಹಾಗೂ ದ್ವಿಪಕ್ಷೀಯ ಸಂಬಂಧಗಳಿಗೆ ಹಾನಿಕಾರಕ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.

ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಸುದ್ದಿ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಂವಾದದಲ್ಲಿ ಮಾತನಾಡಿದ ಪುಟಿನ್, ಭಾರತ-ಅಮೆರಿಕ ಸಹಕಾರದಿಂದ ರಷ್ಯಾ-ಭಾರತ ಸಂಬಂಧಗಳಿಗೆ ಯಾವುದೇ ತೊಂದರೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಭಾರತವು 1.5 ಶತಕೋಟಿ ಜನಸಂಖ್ಯೆ ಹೊಂದಿರುವ ದೊಡ್ಡ ರಾಷ್ಟ್ರ. ತನ್ನ ಹಿತಾಸಕ್ತಿಗಳಿಗೆ ಅನುಗುಣವಾಗಿ ಯಾವ ದೇಶಗಳೊಂದಿಗೆ ಬೇಕಾದರೂ ಆರ್ಥಿಕ ಹಾಗೂ ರಾಜತಾಂತ್ರಿಕ ಸಂಬಂಧಗಳನ್ನು ಬೆಳೆಸುವುದು ಸಹಜ ಎಂದು ಅವರು ಹೇಳಿದರು.

ರಷ್ಯಾದೊಂದಿಗೆ ಭಾರತದ ಸಹಕಾರದ ವಿಷಯದಲ್ಲಿ ಅಮೆರಿಕ ಒತ್ತಡ ಹೇರುವ ಪ್ರಯತ್ನ ಮಾಡುತ್ತಿದೆ ಎಂಬ ವರದಿಗಳ ಕುರಿತು ಪ್ರತಿಕ್ರಿಯಿಸಿದ ಪುಟಿನ್, ವಿಶ್ವದ ಅತಿ ಹೆಚ್ಚು ಜನಸಂಖ್ಯೆಯ ದೇಶದ ಪ್ರಧಾನಿಯ ಮೇಲೆ ಒತ್ತಡ ಹೇರುವುದು ಅಂತರರಾಷ್ಟ್ರೀಯ ಸಂಬಂಧಗಳಿಗೆ ಒಳ್ಳೆಯದಲ್ಲ. ಆ ಒತ್ತಡ ಎಲ್ಲಿಂದ ಬಂದರೂ ಅದು ಸಂಬಂಧಗಳಿಗೆ ಹಾನಿಕಾರಕ ಎಂದು ಹೇಳಿದರು.

ಭಾರತವು ಸ್ವತಂತ್ರ ವಿದೇಶಾಂಗ ನೀತಿಯನ್ನು ಅನುಸರಿಸುತ್ತಿದ್ದು, ತನ್ನ ರಾಷ್ಟ್ರೀಯ ಹಿತಾಸಕ್ತಿಗಳ ಆಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಪುಟಿನ್ ಮೆಚ್ಚುಗೆ ವ್ಯಕ್ತಪಡಿಸಿದರು.