Sunday, June 21

ವಿಧಾನಪರಿಷತ್‌ನಲ್ಲಿ ಕಾಂಗ್ರೆಸ್ ಬಲ ಹೆಚ್ಚಳ: 39ಕ್ಕೆ ಏರಿಕೆ, ಬಿಜೆಪಿ 28ಕ್ಕೆ, ಜೆಡಿಎಸ್ 6ಕ್ಕೆ ಕುಸಿತ

ಬೆಂಗಳೂರು: ರಾಜ್ಯ ವಿಧಾನಪರಿಷತ್ ಚುನಾವಣೆಯ ಫಲಿತಾಂಶದೊಂದಿಗೆ ಮೇಲ್ಮನೆಯ ರಾಜಕೀಯ ಚಿತ್ರಣ ಮಹತ್ವದ ಬದಲಾವಣೆಗೆ ಸಾಕ್ಷಿಯಾಗಿದೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷ ತನ್ನ ಬಲವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದು, ಸದನದಲ್ಲಿ ಸಂಖ್ಯಾಬಲದ ಮೇಲುಗೈ ಸಾಧಿಸಿದೆ.

ಚುನಾವಣಾ ಫಲಿತಾಂಶದ ಬಳಿಕ ವಿಧಾನಪರಿಷತ್‌ನಲ್ಲಿ ಕಾಂಗ್ರೆಸ್ ಸದಸ್ಯರ ಸಂಖ್ಯೆ 39ಕ್ಕೆ ಏರಿಕೆಯಾಗಲಿದ್ದು, ಬಿಜೆಪಿ ಬಲ 28ಕ್ಕೆ ಹಾಗೂ ಜೆಡಿಎಸ್ ಬಲ 6ಕ್ಕೆ ಇಳಿಕೆಯಾಗಲಿದೆ. ಈ ಬೆಳವಣಿಗೆಯಿಂದ ಕಾಂಗ್ರೆಸ್ ಪಕ್ಷದ ಹಿಡಿತ ಇನ್ನಷ್ಟು ಬಲವಾಗುವ ನಿರೀಕ್ಷೆ ವ್ಯಕ್ತವಾಗಿದೆ.

ಇದೀಗ ಕಾಂಗ್ರೆಸ್ 37, ಬಿಜೆಪಿ 29 ಹಾಗೂ ಜೆಡಿಎಸ್ 7 ಸದಸ್ಯರನ್ನು ಹೊಂದಿವೆ. ಕಾಂಗ್ರೆಸ್ ಮತ್ತು ಬಿಜೆಪಿ ತಲಾ ಮೂವರು ಹಾಗೂ ಜೆಡಿಎಸ್‌ನ ಒಬ್ಬ ಸದಸ್ಯರ ಅವಧಿ ಜೂನ್ 30ರಂದು ಅಂತ್ಯಗೊಳ್ಳಲಿದ್ದು, ನೂತನ ಸದಸ್ಯರ ಅವಧಿ ಜುಲೈ 1ರಿಂದ ಆರಂಭವಾಗಲಿದೆ.

ಇದರ ನಡುವೆ, ವಿಧಾನಪರಿಷತ್‌ನಲ್ಲಿ ಬಹುಮತ ಹೆಚ್ಚಿಸಿಕೊಂಡಿರುವ ಕಾಂಗ್ರೆಸ್, ಸಭಾಪತಿ ಸ್ಥಾನವನ್ನೂ ತನ್ನ ವಶಕ್ಕೆ ಪಡೆಯುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಲು ಮುಂದಾಗಿದೆ ಎನ್ನಲಾಗಿದೆ.