
ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕೇಂದ್ರ ಗೃಹ ಸಚಿವಾಲಯವು ಕರ್ನಾಟಕ ಪೊಲೀಸ್ ಇಲಾಖೆಯ 17 ಅಧಿಕಾರಿಗಳು ಮತ್ತು ಸಿಬ್ಬಂದಿಗೆ ರಾಷ್ಟ್ರಪತಿ ಪದಕಗಳನ್ನು ಘೋಷಿಸಿದೆ.
ಪೊಲೀಸ್ ಇಲಾಖೆಯಲ್ಲಿ ಶ್ಲಾಘನೀಯ ಸೇವೆ ಸಲ್ಲಿಸಿದ 16 ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ‘ಶ್ಲಾಘನೀಯ ಸೇವಾ ಪದಕ’ ಲಭಿಸಿದೆ. ಪುರಸ್ಕೃತರಲ್ಲಿ ರೈಲ್ವೇಸ್ ಬೆಂಗಳೂರು ಎಸ್ಪಿ ಸಾರಾ ಫಾತಿಮಾ, ಕೆಎಸ್ಆರ್ಪಿ ಕಮಾಂಡೆಂಟ್ ಥಾಮಸ್ ಮ್ಯಾಥ್ಯೂ, ಆಗ್ನೇಯ ಸಂಚಾರ ವಿಭಾಗದ ಎಸಿಪಿ ಮಹಾದೇವ್, ರಾಯಚೂರು ಡಿಎಆರ್ನ ಡಿವೈಎಸ್ಪಿ ಪರಮಾನಂದ್ ಸೇರಿದಂತೆ ವಿವಿಧ ವಿಭಾಗಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದಾರೆ.
ಪೊಲೀಸ್ ತರಬೇತಿ ಶಾಲೆ ಮೈಸೂರು, ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆ, ಸಿಐಡಿ, ರಾಜಭವನ, ಕೆಪಿ ಅಗ್ರಹಾರ ಪೊಲೀಸ್ ಠಾಣೆ, ಕೆಎಸ್ಆರ್ಪಿ, ವಿಧಾನಸೌಧ ಭದ್ರತೆ, ಡಿಸಿಆರ್ಇ ಕೆಜಿಎಫ್, ತರೀಕೆರೆ ಹಾಗೂ ಹುಣಸೂರು ಠಾಣೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗೂ ಪದಕ ಘೋಷಿಸಲಾಗಿದೆ.

ಇದೇ ವೇಳೆ, ಪೊಲೀಸ್ ಇಲಾಖೆಯಲ್ಲಿ ಅತ್ಯಂತ ವಿಶಿಷ್ಟ ಹಾಗೂ ಸುದೀರ್ಘ ಸೇವೆ ಸಲ್ಲಿಸಿರುವ ಬೆಂಗಳೂರು ಸಿಸಿಬಿಯ ಸಹಾಯಕ ಪೊಲೀಸ್ ಆಯುಕ್ತ ಹೆಚ್.ಎನ್. ಧರ್ಮೇಂದ್ರ ಅವರಿಗೆ ಪ್ರತಿಷ್ಠಿತ ‘ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕ’ ಗೌರವ ಲಭಿಸಿದೆ.
ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಘೋಷಣೆಯಾಗಿರುವ ಈ ಪದಕಗಳು ಪೊಲೀಸ್ ಇಲಾಖೆಯಲ್ಲಿ ಶ್ಲಾಘನೀಯ ಹಾಗೂ ವಿಶಿಷ್ಟ ಸೇವೆ ಸಲ್ಲಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಯ ಸೇವೆಗೆ ನೀಡಿರುವ ಗೌರವವಾಗಿದೆ.
