
ಕೇಂದ್ರ ಬಜೆಟ್ನಲ್ಲಿ ಬಿಜೆಪಿ ಮೈತ್ರಿ ಸರ್ಕಾರವಿರುವ ರಾಜ್ಯಗಳಿಗೆ ಬಂಪರ್, ವಿಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಿಗೆ ಬಿಡಿಕಾಸು..? ಅನ್ಯಾಯವಾಗಿದೆ, ವಿತ್ತ ಸಚಿವರು ಹಾಗೂ ಪ್ರಧಾನಿಯವರು ಪುನರ್ ಪರಿಶೀಲಿಸಬೇಕು ಎಂದು ಭಂಡಾರಿ ಸಲಹೆ..!
ಬೆಂಗಳೂರು: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ ಮಂಡಿಸಿರುವುದು ‘ಸಾಲದ ಬಜೆಟ್’ ಆಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆದ ಶಾಸಕ ಮಂಜುನಾಥ ಭಂಡಾರಿ ವಿಶ್ಲೇಷಿಸಿದ್ದಾರೆ.
ಕೇಂದ್ರ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಬಡವರಿಗೆ, ಮಧ್ಯಮ ವರ್ಗದವರಿಗೆ, ರೈತರಿಗೆ, ಮಹಿಳೆಯರಿಗೆ ಪೂರಕವಾದ ಒಂದೇ ಒಂದು ಯೋಜನೆ ಈ ಬಾರಿಯ ಆಯವ್ಯಯದಲ್ಲಿ ಇಲ್ಲ ಎಂದು ಬೊಟ್ಟು ಮಾಡಿದ್ದಾರೆ.
ಕೇಂದ್ರ ಬಿಜೆಪಿ ಸರ್ಕಾರದ “ಸಬ್ ಕಾ ಸಾಥ್, ಸಬ್ ಕಾ ವಿಕಾಸ್” ಬಜೆಟ್ ನಲ್ಲಿ ಎಲ್ಲೂ ಪ್ರತಿಫಲಿಸಿಲ್ಲ. ಅದು ಕೇವಲ ಘೋಷಣೆಯಾಗೇ ಉಳಿದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಮಂಜುನಾಥ್ ಭಂಡಾರಿ, ದೆಹಲಿ, ಬಿಹಾರ ಚುನಾವಣೆಯನ್ನು ಗುರಿಯಾಗಿರಿಸಿಕೊಂಡು ಮಂಡಿಸಿದ ಬಜೆಟ್ ಇದಾಗಿದೆ ಎಂದಿದ್ದಾರೆ.
ಕೇಂದ್ರ ಸರ್ಕಾರದ ಮೈತ್ರಿ ಪಕ್ಷಗಳ ಸರ್ಕಾರವಿರುವ ರಾಜ್ಯಗಳಿಗೆ ಹೆಚ್ಚಿನ ಅನುದಾನ ನೀಡಲಾಗಿದೆ. ವಿರೋಧ ಪಕ್ಷಗಳ ಸರ್ಕಾರ ಇರುವ ರಾಜ್ಯಗಳಿಗೆ ತಾರತಮ್ಯ ಮಾಡಲಾಗಿದೆ. ಅನ್ಯಾಯವಾಗಿದೆ. ಇದನ್ನು ವಿತ್ತ ಸಚಿವರು ಹಾಗೂ ಪ್ರಧಾನ ಮಂತ್ರಿಗಳು ಪುನರ್ ಪರಿಶೀಲನೆ ನಡೆಸಬೇಕು.