Wednesday, February 11

ಫೆ. 12ರಂದು ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ; ಸೇವೆಗಳಲ್ಲಿ ವ್ಯತ್ಯಯ ಸಾಧ್ಯತೆ

ನವದೆಹಲಿ: ವಿವಿಧ ಬೇಡಿಕೆಗಳ ಹಿನ್ನೆಲೆಯಲ್ಲಿ ದೇಶಾದ್ಯಂತ ಫೆಬ್ರವರಿ 12ರಂದು ಬ್ಯಾಂಕ್‌ಗಳ ರಾಷ್ಟ್ರವ್ಯಾಪಿ ಮುಷ್ಕರ ನಡೆಯಲಿದೆ. ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ, ಭಾರತೀಯ ಬ್ಯಾಂಕ್ ನೌಕರರ ಒಕ್ಕೂಟ (ಬಿಇಎಫ್‌ಐ) ಮತ್ತು ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘ (ಎಐಬಿಒಎ) ಸೇರಿದಂತೆ ಪ್ರಮುಖ ಸಂಘಟನೆಗಳು ಈ ಕುರಿತು ಮುಷ್ಕರ ನೋಟಿಸ್ ನೀಡಿವೆ.

ಭಾರತೀಯ ಬ್ಯಾಂಕುಗಳ ಸಂಘ (ಐಬಿಎ) ಜತೆ ನಡೆದ ಸಮಾಲೋಚನೆ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. ವಾರದಲ್ಲಿ ಐದು ದಿನಗಳ ಕೆಲಸ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಜನವರಿ 27ರಂದು ಕೂಡ ಬ್ಯಾಂಕ್‌ಗಳು ಒಂದು ದಿನದ ಮುಷ್ಕರ ನಡೆಸಿದ್ದವು.

ಕಳೆದ ವರ್ಷ ಸರ್ಕಾರ ಅಧಿಸೂಚನೆ ಹೊರಡಿಸಿದ ನಾಲ್ಕು ಹೊಸ ಕಾರ್ಮಿಕ ಕಾನೂನುಗಳಿಗೆ ವಿರೋಧವಾಗಿ 10 ಕೇಂದ್ರ ಕಾರ್ಮಿಕ ಸಂಘಟನೆಗಳು ಕರೆದಿರುವ ರಾಷ್ಟ್ರವ್ಯಾಪಿ ಪ್ರತಿಭಟನೆಯಲ್ಲಿ ಬ್ಯಾಂಕ್ ನೌಕರರು ಭಾಗವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳ ಜೊತೆಗೆ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಮತ್ತು ಅಂಚೆ ಕಚೇರಿಗಳ ಸೇವೆಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಕಾರ್ಮಿಕ ಸಂಘಟನೆಗಳ ಮುಖಂಡರು ತಿಳಿಸಿದ್ದಾರೆ.

ಮುಷ್ಕರದ ದಿನ ಶಾಖೆಗಳು ತೆರೆದಿದ್ದರೂ ನಗದು ವಹಿವಾಟು ಹಾಗೂ ಚೆಕ್ ಕ್ಲಿಯರಿಂಗ್ ಕಾರ್ಯಗಳಲ್ಲಿ ವಿಳಂಬವಾಗುವ ಸಾಧ್ಯತೆ ಇದೆ. ಆದರೆ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸಲಿವೆ ಎಂದು ಬ್ಯಾಂಕ್‌ಗಳು ಗ್ರಾಹಕರಿಗೆ ತಿಳಿಸಿವೆ. ತುರ್ತು ಬ್ಯಾಂಕಿಂಗ್ ವ್ಯವಹಾರಗಳನ್ನು ಮುಂಚಿತವಾಗಿ ಪೂರ್ಣಗೊಳಿಸುವಂತೆ ಗ್ರಾಹಕರಿಗೆ ಸಲಹೆ ನೀಡಲಾಗಿದೆ.