
ಕೊಚ್ಚಿ: ವಿವಾದಾತ್ಮಕ ವಿಷಯ ಹೊಂದಿರುವ ‘ದಿ ಕೇರಳ ಸ್ಟೋರಿ 2’ ಚಿತ್ರದ ಬಿಡುಗಡೆಯಿಗೆ ಕೇರಳ ಹೈಕೋರ್ಟ್ ತಾತ್ಕಾಲಿಕ ತಡೆ ವಿಧಿಸಿದೆ. ಫೆಬ್ರವರಿ 27ರಂದು ಬಿಡುಗಡೆಗೊಳ್ಳಬೇಕಿದ್ದ ಚಿತ್ರವನ್ನು ವಿಚಾರಣೆ ಪೂರ್ಣಗೊಳ್ಳುವವರೆಗೆ ರಿಲೀಸ್ ಮಾಡಬಾರದು ಎಂದು ಕೋರ್ಟ್ ಸೂಚಿಸಿದೆ.
ಚಿತ್ರದ ಟೀಸರ್ ಬಿಡುಗಡೆಯಾದ ಬಳಿಕ ಕೇರಳವನ್ನು ಕೆಟ್ಟದಾಗಿ ಬಿಂಬಿಸಲಾಗಿದೆ ಹಾಗೂ ಕೋಮು ಉದ್ವಿಗ್ನತೆಗೆ ಕಾರಣವಾಗಬಹುದು ಎಂದು ಆರೋಪಿಸಿ ಕೆಲವರು ಅರ್ಜಿ ಸಲ್ಲಿಸಿದ್ದರು. ಚಿತ್ರಕ್ಕೆ ಪ್ರಮಾಣಪತ್ರ ನೀಡಿದ ಸೆನ್ಸಾರ್ ಮಂಡಳಿಯ ಕ್ರಮವನ್ನೂ ಪ್ರಶ್ನಿಸಲಾಗಿದೆ. ಈ ಸಂಬಂಧ ಮೂರು ಅರ್ಜಿಗಳ ವಿಚಾರಣೆ ಬಾಕಿ ಇದೆ.
ಚಿತ್ರತಂಡದ ಪರವಾಗಿ ವಿದೇಶಿ ವಿತರಣೆ ಹಕ್ಕುಗಳು ಈಗಾಗಲೇ ಮಾರಾಟವಾಗಿವೆ, ನಿಗದಿತ ದಿನವೇ ಬಿಡುಗಡೆ ಅಗತ್ಯ ಎಂದು ವಾದಿಸಲಾಯಿತಾದರೂ, “ಎಲ್ಲ ವಾದಗಳನ್ನು ಆಲಿಸಿದ ಬಳಿಕವೇ ತೀರ್ಮಾನ” ಎಂದು ನ್ಯಾಯಾಧೀಶರು ತಿಳಿಸಿ ಬಿಡುಗಡೆಯನ್ನು ಮುಂದೂಡಲು ಸೂಚಿಸಿದರು.
‘ದಿ ಕೇರಳ ಸ್ಟೋರಿ 2’ ಚಿತ್ರವನ್ನು ಕಾಮಾಕ್ಯ ನಾರಾಯಣ್ ಸಿಂಗ್ ನಿರ್ದೇಶಿಸಿದ್ದಾರೆ. ವಿಪುಲ್ ಅಮೃತ್‌ಲಾಲ್ ಶಾ ನಿರ್ಮಾಣ ಮಾಡಿದ್ದಾರೆ. ಉಲ್ಕಾ ಗುಪ್ತಾ, ಅದಿತಿ ಭಾಟಿಯಾ ಮತ್ತು ಐಶ್ವರ್ಯಾ ಊಜಾ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
2023ರಲ್ಲಿ ಬಿಡುಗಡೆಯಾದ ದಿ ಕೇರಳ ಸ್ಟೋರಿ ಚಿತ್ರದ ಮುಂದುವರಿದ ಭಾಗವಾಗಿ ‘ದಿ ಕೇರಳ ಸ್ಟೋರಿ 2: ಗೋಸ್ ಬಿಯಾಂಡ್’ ಸಿದ್ಧಗೊಂಡಿದೆ. ಟೀಸರ್ ಬಿಡುಗಡೆಯಾದ ಬಳಿಕವೇ ಚಿತ್ರ ವಿವಾದಕ್ಕೆ ಗುರಿಯಾಗಿದೆ.
