Thursday, March 19

‘ಕ್ಯಾನ್ಸರ್ ಬಗ್ಗೆ ಮುನ್ನೆಚ್ಚರಿಕೆ ಅಗತ್ಯ’: ಐಐಐಟಿ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಡಾ. ಪದ್ಮಿನಿ ಪ್ರಸಾದ್ ಕರೆ

ಬೆಂಗಳೂರು: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸ್ತ್ರೀ ಆರೋಗ್ಯ ಕುರಿತು ಜಾಗೃತಿ ಕಾರ್ಯಕ್ರಮಗಳು ರಾಜ್ಯದಾದ್ಯಂತ ಜೋರಾಗಿ ನಡೆಯುತ್ತಿವೆ. ಈ ಹಿನ್ನೆಲೆ ಖ್ಯಾತ ಸ್ತ್ರೀರೋಗ ತಜ್ಞೆ ಡಾ. ಪದ್ಮಿನಿ ಪ್ರಸಾದ್ (Dr. Padmini Prasad) ಅವರ ಆರೋಗ್ಯ ಜಾಗೃತಿ ಅಭಿಯಾನ ವಿಶೇಷ ಗಮನಸೆಳೆದಿದೆ.

ವರ್ಷಗಳಿನಿಂದ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಮಹಿಳೆಯರ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಡಾ. ಪದ್ಮಿನಿ ಪ್ರಸಾದ್, ಈ ಬಾರಿ ಗರ್ಭಕಂಠ ಕ್ಯಾನ್ಸರ್ (Cervical Cancer) ಕುರಿತ ಕಾರ್ಯಕ್ರಮಗಳ ಸರಣಿಯನ್ನು ಹಮ್ಮಿಕೊಂಡಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಐಐಐಟಿ ಬೆಂಗಳೂರು (IIIT Bangalore), ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದ ಮೂರನೇ ಹಂತದ ಜಾಗೃತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, ದೇಹದ ಬೆಳವಣಿಗೆ, ದೈಹಿಕ-ಮಾನಸಿಕ ಆರೋಗ್ಯ, ಲೈಂಗಿಕ ಬೆಳವಣಿಗೆ, ಲೈಂಗಿಕ ಕಿರುಕುಳ ಮತ್ತು ರಕ್ಷಣೆಯ ಬಗ್ಗೆ ಸಮಗ್ರ ಮಾಹಿತಿ ನೀಡಿದರು.

“ಪ್ರಸ್ತುತ ಜೀವನಶೈಲಿ ಹಲವು ಕಾಯಿಲೆಗಳಿಗೆ ಕಾರಣವಾಗುತ್ತಿದೆ. ಯುವಕರು ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯ,” ಎಂದು ಅವರು ಸಲಹೆ ನೀಡಿದರು. ದೀರ್ಘ ಸಂವಾದದಲ್ಲಿ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ನೀಡಿದ ಅವರು, ಮಾಹಿತಿಯುಕ್ತ ಒಪ್ಪಿಗೆಯ ಮಹತ್ವ, ಲೈಂಗಿಕ ನಡವಳಿಕೆ ಮತ್ತು ಅಪಾಯಗಳ ಕುರಿತು ಅರಿವು ಮೂಡಿಸಿದರು.

ಇಂದಿನ ಪರಿಸ್ಥಿತಿಯಲ್ಲಿ ಕ್ಯಾನ್ಸರ್ ದೊಡ್ಡ ಸವಾಲಾಗಿದ್ದು, ವಿಶೇಷವಾಗಿ ಗರ್ಭಕಂಠ ಕ್ಯಾನ್ಸರ್ ಮಹಿಳೆಯರಲ್ಲಿ ಹೆಚ್ಚುತ್ತಿರುವ ಆತಂಕಕ್ಕೆ ಕಾರಣವಾಗಿದೆ. ಆದರೆ ಸರಿಯಾದ ಮುನ್ನೆಚ್ಚರಿಕೆ ಮತ್ತು ತಪಾಸಣೆಯಿಂದ ಈ ಕಾಯಿಲೆಯನ್ನು ತಡೆಗಟ್ಟಬಹುದು ಎಂದು ಅವರು ಹೇಳಿದರು.

ಎಚ್‌ಪಿವಿ ಲಸಿಕೆ (HPV Vaccine) ಬಗ್ಗೆ ವಿವರಿಸಿದ ಅವರು, “ಈ ಲಸಿಕೆ ಕ್ಯಾನ್ಸರ್ ತಡೆಗಟ್ಟುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ,” ಎಂದು ತಿಳಿಸಿದರು.

ಲಿಂಗ ಸಂವೇದನೆ, ಲಿಂಗ ಗುರುತಿಸುವಿಕೆ ಹಾಗೂ ಲೈಂಗಿಕವಾಗಿ ಹರಡುವ ಸೋಂಕುಗಳ ಬಗ್ಗೆ ಜಾಗೃತಿ ಅಗತ್ಯವಿದೆ ಎಂದು ಅವರು ಒತ್ತಿಹೇಳಿದರು. ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈ ರೀತಿಯ ಕಾರ್ಯಕ್ರಮಗಳು ಯುವಜನತೆಗೆ ಮಾರ್ಗದರ್ಶನ ನೀಡುತ್ತಿವೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.