
ಜೆರುಸಲೇಮ್: ಇಸ್ರೇಲ್‌ನ ದಕ್ಷಿಣ ಭಾಗದಲ್ಲಿ ಇರುವ ಡಿಮೋನಾ ಮತ್ತು ಅರಾಡ್ ನಗರಗಳ ಮೇಲೆ ಇರಾನ್ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಸುಮಾರು 200 ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ 11 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಇಸ್ರೇಲ್ ವಾಯು ರಕ್ಷಣಾ ವ್ಯವಸ್ಥೆ ಕನಿಷ್ಠ ಎರಡು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ತಡೆಯಲು ವಿಫಲವಾದ ಹಿನ್ನೆಲೆಯಲ್ಲಿ ಈ ದಾಳಿ ಭಾರೀ ಹಾನಿ ಉಂಟುಮಾಡಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ದಾಳಿಯ ನಂತರ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ರಕ್ಷಣಾ ಪಡೆಗಳ ಮುಖ್ಯಸ್ಥ ಇಯಾಲ್ ಜಮೀರ್, ಇರಾನ್ ವಿರುದ್ಧ “ಎಲ್ಲಾ ರಂಗಗಳಲ್ಲಿ” ಹೋರಾಟ ಮುಂದುವರಿಯಲಿದೆ ಎಂದು ಘೋಷಿಸಿದರು. ಇದೇ ವೇಳೆ ಇಸ್ರೇಲ್ ವಾಯುಪಡೆ ಇರಾನ್ ರಾಜಧಾನಿ ಟೆಹ್ರಾನ್ನಲ್ಲಿನ ಮೂಲಸೌಕರ್ಯಗಳ ಮೇಲೆ ಪ್ರತಿದಾಳಿ ನಡೆಸುತ್ತಿದೆ ಎಂದು IDF ತಿಳಿಸಿದೆ.
ಡಿಮೋನಾದ ದಾಳಿಯಲ್ಲಿ 12 ವರ್ಷದ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಅಲ್ಲದೆ ಅರಾಡ್‌ನಲ್ಲಿ ನಡೆದ ದಾಳಿಯಲ್ಲಿ ಐದು ವರ್ಷದ ಬಾಲಕಿ ಗಾಯಗೊಂಡಿದ್ದಾಳೆ. ಬೀರ್ ಶೆಬಾದ ಸೊರೊಕಾ ವೈದ್ಯಕೀಯ ಕೇಂದ್ರದಲ್ಲಿ 175ಕ್ಕೂ ಹೆಚ್ಚು ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗಿದೆ.
ಗಾಯಾಳುಗಳಲ್ಲಿ ಹಲವರು ಗಾಜಿನ ಚೂರುಗಳಿಂದ ಅಥವಾ ಆಶ್ರಯಕ್ಕಾಗಿ ಓಡುವ ವೇಳೆ ಗಾಯಗೊಂಡಿದ್ದಾರೆ ಎಂದು ತುರ್ತು ಸೇವಾ ಸಂಸ್ಥೆಗಳು ತಿಳಿಸಿವೆ. ಕೆಲವರಿಗೆ ಆತಂಕದಿಂದಲೂ ಚಿಕಿತ್ಸೆ ನೀಡಲಾಗಿದೆ.
ಕ್ಷಿಪಣಿ ದಾಳಿಯ ಪರಿಣಾಮವಾಗಿ ವಸತಿ ಕಟ್ಟಡವೊಂದು ಬೆಂಕಿಗಾಹುತಿಯಾಗಿದ್ದು, ಸ್ಥಳೀಯವಾಗಿ ಭೀತಿಯ ವಾತಾವರಣ ನಿರ್ಮಾಣವಾಗಿದೆ. ಇರಾನ್–ಇಸ್ರೇಲ್ ಸಂಘರ್ಷ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ ಎಂಬ ಆತಂಕ ಹೆಚ್ಚಾಗಿದೆ.
