Friday, May 15

ಕುಣಿಗಲ್ ಬಳಿ ಭೀಕರ ರಸ್ತೆ ಅಪಘಾತ: ವಿವಾಹ ವಾರ್ಷಿಕೋತ್ಸವದ ದಿನವೇ ನಾಲ್ವರು ದುರ್ಮರಣ

ತುಮಕೂರು: ಕುಣಿಗಲ್ ತಾಲೂಕಿನ ಹೊನ್ನೇನಹಳ್ಳಿ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿ, ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಗೊಬ್ಬರ ತುಂಬಿದ್ದ ಲಾರಿಗೆ ಆಲ್ಟೋ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅಪಘಾತದ ತೀವ್ರತೆಗೆ ಕಾರಿನಲ್ಲಿದ್ದ ಪ್ರಯಾಣಿಕರು ಸಾವನ್ನಪ್ಪಿದ್ದಾರೆ.

ಮೃತರನ್ನು ಸ್ವರ್ಣಸಂದ್ರ ನಿವಾಸಿಗಳಾದ ಕುಮಾರ ನರಸಿಂಹಸ್ವಾಮಿ, ಅವರ ಪತ್ನಿ ಗಾಯತ್ರಿ (60), ಸಹೋದರಿ ಗಾಯತ್ರಿ (55) ಹಾಗೂ ಮತ್ತೋರ್ವ ಪುರುಷ ಎಂದು ಗುರುತಿಸಲಾಗಿದೆ.

ಕುಮಾರ ನರಸಿಂಹಸ್ವಾಮಿ ಅವರು ನಿನ್ನೆ ಕುಟುಂಬದವರೊಂದಿಗೆ ತುಮಕೂರಿಗೆ ಬಂದಿದ್ದರು. ಇಂದು ತಮ್ಮ ವಿವಾಹ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ದೇವರಾಯನದುರ್ಗಕ್ಕೆ ತೆರಳಿ ದೇವರ ದರ್ಶನ ಪಡೆದು ಊರಿಗೆ ಹಿಂದಿರುಗುವ ವೇಳೆ ಈ ದುರಂತ ಸಂಭವಿಸಿದೆ.

ಅಪಘಾತದ ಬಗ್ಗೆ ಸ್ಥಳೀಯ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.