Friday, June 12

ಅನುದಾನ ಹಂಚಿಕೆಯಲ್ಲಿ ತಾರತಮ್ಯ ಆರೋಪ; ಸಿದ್ದರಾಮಯ್ಯ ಸ್ಪಷ್ಟನೆ

ಬೆಂಗಳೂರು: ಹಿಂದುಳಿದ ವರ್ಗಗಳ ಸಮುದಾಯ ಭವನ ಮತ್ತು ವಿದ್ಯಾರ್ಥಿ ನಿಲಯಗಳ ನಿರ್ಮಾಣಕ್ಕೆ ನೀಡಲಾದ ಅನುದಾನದಲ್ಲಿ ತಾರತಮ್ಯ ನಡೆದಿದೆ ಎಂಬ ಆರೋಪಗಳಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಕುರುಬ ಸಮುದಾಯಕ್ಕೆ ಹೆಚ್ಚಿನ ಅನುದಾನ ನೀಡಿರುವುದು ಉದ್ದೇಶಪೂರ್ವಕವಲ್ಲ, ಆ ಸಮುದಾಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ಮನವಿಗಳು ಸಲ್ಲಿಕೆಯಾಗಿದ್ದರಿಂದ ಮಾತ್ರ ಎಂದು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿವಿಧ ಸಂಘ-ಸಂಸ್ಥೆಗಳಿಂದ ಬಂದ ಮನವಿಗಳನ್ನು ಪರಿಶೀಲಿಸಿ, ಸುಮಾರು 155 ಸಂಘಟನೆಗಳಿಗೆ ₹71.85 ಕೋಟಿ ವೆಚ್ಚದಲ್ಲಿ ಸಮುದಾಯ ಭವನ ಮತ್ತು ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ಪೂರ್ವಭಾವಿ ಮಂಜೂರಾತಿ ನೀಡಿದೆ ಎಂದು ಹೇಳಿದ್ದಾರೆ.

ಇದು ಅಂತಿಮ ಫಲಾನುಭವಿಗಳ ಪಟ್ಟಿ ಅಲ್ಲ. ಇತರೆ ಹಿಂದುಳಿದ ಜಾತಿಗಳಿಂದ ಬಂದಿರುವ ಮನವಿಗಳನ್ನೂ ಪರಿಶೀಲಿಸಿ ಮುಂದಿನ ಹಂತಗಳಲ್ಲಿ ಅನುದಾನ ಮಂಜೂರು ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಕುರುಬ ಸಮುದಾಯದ ಜೊತೆಗೆ ಮಡಿವಾಳ, ಲಿಂಗಾಯತ, ಒಕ್ಕಲಿಗ, ಬೆಸ್ತ, ಬಲಿಜ, ಗೊಲ್ಲ, ಜೆಟ್ಟಿ, ಕುಂಬಾರ, ಅರಸು, ಹೆಳವ, ಸವಿತಾ ಸಮಾಜ, ಉಪ್ಪಾರ, ಗಾಣಿಗ, ಕುರುಹಿನ ಶೆಟ್ಟಿ, ಹಾಲಕ್ಕಿ ಹಾಗೂ ರೆಡ್ಡಿ ಸಮುದಾಯಗಳ ಸಮುದಾಯ ಭವನ ಮತ್ತು ವಿದ್ಯಾರ್ಥಿ ನಿಲಯಗಳ ನಿರ್ಮಾಣಕ್ಕೂ ಪೂರ್ವಭಾವಿ ಆದೇಶ ನೀಡಲಾಗಿದೆ ಎಂದು ಹೇಳಿದ್ದಾರೆ.

ಈ ಆದೇಶವು ಕೇವಲ ಪೂರ್ವಭಾವಿ ಮಂಜೂರಾತಿಯಾಗಿದ್ದು, ಅನುದಾನ ಬಿಡುಗಡೆ ಆದೇಶವಲ್ಲ. ಅನುದಾನ ಪಡೆಯಲು ಸಂಬಂಧಿತ ಸಂಘ-ಸಂಸ್ಥೆಗಳು ಜಮೀನು ದಾಖಲೆ, ಕಟ್ಟಡ ಪರವಾನಗಿ, ಮೂರು ವರ್ಷದ ಲೆಕ್ಕಪರಿಶೋಧನಾ ವರದಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಇಲಾಖೆಗೆ ಸಲ್ಲಿಸಬೇಕಾಗುತ್ತದೆ ಎಂದು ವಿವರಿಸಿದ್ದಾರೆ.

ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಕಾಮಗಾರಿಯ ಪ್ರಗತಿ ಪರಿಶೀಲಿಸಿ ಮೂರು ಹಂತಗಳಲ್ಲಿ ಅನುದಾನ ಬಿಡುಗಡೆ ಮಾಡಲಾಗುತ್ತದೆ. ಪ್ರವರ್ಗ-1 ಮತ್ತು 2ಎ ಜಾತಿಗಳಿಗೆ ಶೇ.70 ಹಾಗೂ ಪ್ರವರ್ಗ-3ಎ ಮತ್ತು 3ಬಿ ಜಾತಿಗಳಿಗೆ ಶೇ.30ರಷ್ಟು ಅನುದಾನ ಹಂಚಿಕೆ ಮಾಡುವ ನಿಯಮ ಜಾರಿಯಲ್ಲಿದ್ದು, ಕೆಲವು ಸಮುದಾಯಗಳಿಗೆ ಹೆಚ್ಚಿನ ಅನುದಾನ ದೊರಕಿರುವುದಕ್ಕೆ ಇದೇ ಕಾರಣ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.