Sunday, July 26

ಸಿನಿರಸಿಕರನ್ನು ರಂಜಿಸುತ್ತಿದೆ ‘ವಿಶ್ವನಾಥ್ & ಸನ್ಸ್’ ಚಿತ್ರದ ‘ದಿ ವೆಡ್ಡಿಂಗ್ ಸಾಂಗ್’; ಆಗಸ್ಟ್ 14ರಂದು ಈ ಸಿನಿಮಾ ತೆರೆಗೆ

ಚೆನ್ನೈ: ನಿರ್ದೇಶಕ ವೆಂಕಿ ಅಟ್ಲೂರಿ ಅವರ ಬಹುನಿರೀಕ್ಷಿತ ಆಕ್ಷನ್-ಫ್ಯಾಮಿಲಿ ಎಂಟರ್‌ಟೈನರ್ ‘ವಿಶ್ವನಾಥ್ & ಸನ್ಸ್’ ಚಿತ್ರದ ‘ದಿ ವೆಡ್ಡಿಂಗ್ ಸಾಂಗ್’ ಬಿಡುಗಡೆಯಾಗಿ ಸಿನಿಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ.

ಮದುವೆ ಸಂಭ್ರಮವನ್ನು ಬಿಂಬಿಸುವ ಈ ಹಾಡಿನಲ್ಲಿ ನಟ ಸೂರ್ಯ ಮತ್ತು ಮಮಿತಾ ಬೈಜು ಅವರ ನೃತ್ಯ ಪ್ರಮುಖ ಆಕರ್ಷಣೆಯಾಗಿದೆ. ವಿಶೇಷವೆಂದರೆ, ಈ ಹಾಡಿಗೆ ಸೂರ್ಯ ಅವರೇ ಧ್ವನಿ ನೀಡಿದ್ದು, ಹಾಡಿಗೆ ಮತ್ತಷ್ಟು ವಿಶೇಷತೆ ತಂದಿದ್ದಾರೆ.

ರಾಷ್ಟ್ರೀಯ ಪ್ರಶಸ್ತಿ ವಿಜೇತ ಜಿ.ವಿ. ಪ್ರಕಾಶ್ ಕುಮಾರ್ ಸಂಗೀತ ಸಂಯೋಜಿಸಿದ್ದು, ಕೆನ್ ಕರುಣಾಸ್ ಸಾಹಿತ್ಯ ಬರೆದಿದ್ದಾರೆ. ಈ ಹಾಡನ್ನು ಸೂರ್ಯ ಹಾಡಿರುವ ಬಗ್ಗೆ ಜೂನ್ ತಿಂಗಳಲ್ಲೇ ಜಿ.ವಿ. ಪ್ರಕಾಶ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದರು.

ಬ್ಲಾಕ್‌ಬಸ್ಟರ್ ನಿರ್ದೇಶಕ ವೆಂಕಿ ಅಟ್ಲೂರಿ ನಿರ್ದೇಶಿಸಿರುವ ಈ ಚಿತ್ರವನ್ನು ಸೂರ್ಯದೇವರ ನಾಗ ವಂಶಿ ಮತ್ತು ಸಾಯಿ ಸೌಜನ್ಯ ನಿರ್ಮಿಸಿದ್ದಾರೆ. ಭಾವನೆ, ಹಾಸ್ಯ ಹಾಗೂ ಕೌಟುಂಬಿಕ ಕಥಾಹಂದರ ಹೊಂದಿರುವ ಚಿತ್ರ ಇದಾಗಿದೆ.

ಚಿತ್ರದ ಟೀಸರ್ ಈಗಾಗಲೇ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದ್ದು, 40ರ ಹರೆಯದಲ್ಲೂ ಕನಸುಗಳನ್ನು ಬೆನ್ನಟ್ಟುವ ಅಂತರರಾಷ್ಟ್ರೀಯ ಪಿಸ್ತೂಲ್ ಶೂಟರ್ ಸಂಜಯ್ ವಿಶ್ವನಾಥ್ ಪಾತ್ರದಲ್ಲಿ ಸೂರ್ಯ ಕಾಣಿಸಿಕೊಂಡಿದ್ದಾರೆ. ಮಮಿತಾ ಬೈಜು ಜೊತೆಗಿನ ವಿಭಿನ್ನ ಪ್ರೇಮಕಥೆಯೂ ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ.

ಚಿತ್ರದಲ್ಲಿ ರಾಧಿಕಾ ಶರತ್‌ಕುಮಾರ್ ಮತ್ತು ರವೀನಾ ಟಂಡನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ನಿಮಿಷ್ ರವಿ ಛಾಯಾಗ್ರಹಣ ಹಾಗೂ ನವೀನ್ ನೂಲಿ ಸಂಕಲನ ನಿರ್ವಹಿಸಿದ್ದಾರೆ. ‘ವಿಶ್ವನಾಥ್ & ಸನ್ಸ್’ ಚಿತ್ರವು ಆಗಸ್ಟ್ 14ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.