Tuesday, July 28

ಕತಾರ್‌ನಲ್ಲಿ ಭಾರತೀಯ ರಾಯಭಾರಿ ವಿಪುಲ್ ಅವರಿಗೆ ಭಾವಪೂರ್ಣ ಬೀಳ್ಕೊಡುಗೆ

ದೋಹಾ: ಕತಾರ್‌ನಲ್ಲಿ ಮೂರು ವರ್ಷಗಳ ಯಶಸ್ವಿ ಅಧಿಕಾರಾವಧಿ ಪೂರ್ಣಗೊಳಿಸಿದ ಭಾರತದ ರಾಯಭಾರಿ ವಿಪುಲ್ ಅವರಿಗೆ ಅನಿವಾಸಿ ಭಾರತೀಯ ಸಮುದಾಯವು ಆತ್ಮೀಯ ಹಾಗೂ ಭಾವಪೂರ್ಣ ಬೀಳ್ಕೊಡುಗೆ ನೀಡಿತು. ದೋಹಾದ ಐಸಿಸಿ ಅಶೋಕ ಸಭಾಂಗಣದಲ್ಲಿ ನಡೆದ ಸಮಾರಂಭವನ್ನು ಭಾರತೀಯ ಸಾಂಸ್ಕೃತಿಕ ಕೇಂದ್ರ (ICC), ಭಾರತೀಯ ಸಮುದಾಯ ಕಲ್ಯಾಣ ವೇದಿಕೆ (ICBF), ಭಾರತೀಯ ಕ್ರೀಡಾ ಕೇಂದ್ರ (ISC) ಹಾಗೂ ಭಾರತೀಯ ಉದ್ಯಮ ಮತ್ತು ವೃತ್ತಿಪರರ ಮಂಡಳಿ (IBPC) ಜಂಟಿಯಾಗಿ ಆಯೋಜಿಸಿತ್ತು.

ಸಮಾರಂಭದಲ್ಲಿ ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಹಾಗೂ ಗಣ್ಯರು ವಿಪುಲ್ ಅವರನ್ನು ‘ಪೀಪಲ್ಸ್ ಅಂಬಾಸಿಡರ್’ ಎಂದು ಗೌರವಿಸಿ, ಭಾರತೀಯ ಸಮುದಾಯದ ಸಮಸ್ಯೆಗಳಿಗೆ ಸ್ಪಂದಿಸಿದ ಅವರ ಸೇವೆಯನ್ನು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಿಪುಲ್, ಕತಾರ್‌ನಲ್ಲಿರುವ 8.3 ಲಕ್ಷಕ್ಕೂ ಅಧಿಕ ಭಾರತೀಯ ಸಮುದಾಯ ವಿಶ್ವದ ಅತ್ಯಂತ ಶಿಸ್ತಿನ ಸಮುದಾಯಗಳಲ್ಲಿ ಒಂದಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ತಮ್ಮ ಅಧಿಕಾರಾವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕತಾರ್ ಭೇಟಿ ಹಾಗೂ ಕತಾರ್ ಅಮೀರ್ ಅವರ ಭಾರತ ಭೇಟಿ ಉಭಯ ದೇಶಗಳ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಿದೆ ಎಂದು ಹೇಳಿದರು. ಕರ್ನಾಟಕ ಸಂಘ ಕತಾರ್ ಸೇರಿದಂತೆ ವಿವಿಧ ಸಾಂಸ್ಕೃತಿಕ ಸಂಸ್ಥೆಗಳು ಭಾರತೀಯ ಸಂಸ್ಕೃತಿಯನ್ನು ವಿದೇಶದಲ್ಲೂ ಉಳಿಸಿ ಬೆಳೆಸುತ್ತಿರುವ ಕಾರ್ಯವನ್ನು ಅವರು ಪ್ರಶಂಸಿಸಿದರು.

ಕಾರ್ಯಕ್ರಮದಲ್ಲಿ ಐಸಿಸಿ ಅಧ್ಯಕ್ಷ ಎ.ಪಿ. ಮಣಿಕಂಠನ್, ಐಸಿಬಿಎಫ್ ಅಧ್ಯಕ್ಷ ಶಾನವಾಸ್ ಬಾವಾ, ಐಎಸ್‌ಸಿ ಅಧ್ಯಕ್ಷ ಇ.ಪಿ. ಅಬ್ದುಲ್ ರಹಮಾನ್, ಐಬಿಪಿಸಿ ಅಧ್ಯಕ್ಷ ತಾಹಾ ಮಹಮ್ಮದ್ ಸೇರಿದಂತೆ ನೂರಾರು ಭಾರತೀಯರು ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಕರ್ನಾಟಕ ಸಂಘ ಕತಾರ್‌ನ ಪದಾಧಿಕಾರಿಗಳು ಹಾಗೂ ಸಲಹೆಗಾರರು ವಿಪುಲ್ ಅವರನ್ನು ಭೇಟಿ ಮಾಡಿ, ಅನಿವಾಸಿ ಕನ್ನಡಿಗರು, ಕನ್ನಡ ಭಾಷೆ, ಸಂಸ್ಕೃತಿ ಮತ್ತು ಸಾಮಾಜಿಕ ಚಟುವಟಿಕೆಗಳಿಗೆ ನೀಡಿದ ಬೆಂಬಲಕ್ಕಾಗಿ ಕೃತಜ್ಞತೆ ಸಲ್ಲಿಸಿ, ಅವರ ಮುಂದಿನ ಪಯಣಕ್ಕೆ ಶುಭ ಹಾರೈಸಿದರು.