Tuesday, August 4

ರಾಜ್ಯ ಸಂಪುಟದಲ್ಲಿ ಪ್ರಾದೇಶಿಕ ಅಸಮತೋಲನ?; ಕೋಲಾರ ಸೇರಿ 8 ಜಿಲ್ಲೆಗಳು ಪ್ರಾತಿನಿಧ್ಯದಿಂದ ವಂಚಿತ

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಬಳಿಕವೂ ರಾಜ್ಯದ ಎಂಟು ಜಿಲ್ಲೆಗಳಿಗೆ ಸಚಿವ ಸಂಪುಟದಲ್ಲಿ ಯಾವುದೇ ಪ್ರಾತಿನಿಧ್ಯ ಸಿಕ್ಕಿಲ್ಲ. ವಿಸ್ತರಣೆಯ ನಂತರ ಒಟ್ಟು 23 ಜಿಲ್ಲೆಗಳಿಗೆ ಸಚಿವ ಸ್ಥಾನ ದೊರೆತಿದ್ದರೆ, ಎಂಟು ಜಿಲ್ಲೆಗಳು ಸಂಪುಟದಲ್ಲಿ ಸ್ಥಾನ ಪಡೆಯದೇ ಉಳಿದಿವೆ.

ಈ ಬಾರಿ ಕೋಲಾರ, ಚಿಕ್ಕಬಳ್ಳಾಪುರ, ಕೊಡಗು, ಉಡುಪಿ, ರಾಯಚೂರು, ಯಾದಗಿರಿ, ಗದಗ ಹಾಗೂ ವಿಜಯನಗರ ಜಿಲ್ಲೆಗಳಿಗೆ ಸಚಿವ ಸ್ಥಾನ ಲಭಿಸಿಲ್ಲ.

ಇನ್ನೊಂದೆಡೆ, ಬೆಂಗಳೂರು ನಗರ ಜಿಲ್ಲೆ ಅತಿ ಹೆಚ್ಚು ಪ್ರಾತಿನಿಧ್ಯ ಪಡೆದಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಂಪುಟದಲ್ಲಿ ಈ ಜಿಲ್ಲೆಯಿಂದ ಆರು ಸಚಿವರು ಸ್ಥಾನ ಪಡೆದಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ಕಲಬುರಗಿ ಜಿಲ್ಲೆಯಿಂದ ಮೂವರು ಸಚಿವರು ಸಂಪುಟದಲ್ಲಿದ್ದಾರೆ. ರಾಮನಗರ, ಬೆಳಗಾವಿ, ಕೊಪ್ಪಳ ಹಾಗೂ ಮಂಡ್ಯ ಜಿಲ್ಲೆಗಳಿಂದ ತಲಾ ಇಬ್ಬರು ಸಚಿವರು ಸ್ಥಾನ ಪಡೆದಿದ್ದಾರೆ.

ಬೆಂಗಳೂರು ಗ್ರಾಮಾಂತರ, ತುಮಕೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಹಾಸನ, ಮೈಸೂರು, ಶಿವಮೊಗ್ಗ, ಧಾರವಾಡ, ಹಾವೇರಿ, ಬಾಗಲಕೋಟೆ, ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ಬೀದರ್, ಚಾಮರಾಜನಗರ ಹಾಗೂ ವಿಜಯಪುರ ಜಿಲ್ಲೆಗಳಿಗೆ ತಲಾ ಒಬ್ಬ ಸಚಿವರಿಗೆ ಅವಕಾಶ ದೊರೆತಿದೆ.

ಸಂಪುಟ ವಿಸ್ತರಣೆ ಬಳಿಕವೂ ಎಂಟು ಜಿಲ್ಲೆಗಳು ಪ್ರಾತಿನಿಧ್ಯದಿಂದ ವಂಚಿತವಾಗಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದ್ದು, ಪ್ರಾದೇಶಿಕ ಸಮತೋಲನದ ಕುರಿತು ಪ್ರಶ್ನೆಗಳು ಕೇಳಿಬರುತ್ತಿವೆ.