Thursday, August 6

ದೇಶದಲ್ಲಿ 32 ನಕಲಿ ವಿಶ್ವವಿದ್ಯಾಲಯಗಗಳು ಪತ್ತೆ; ಕಾನೂನು ಕ್ರಮಕ್ಕೆ ಕೇಂದ್ರದ ನಿರ್ದೇಶನ

ನವದೆಹಲಿ: ದೇಶಾದ್ಯಂತ ಕಾರ್ಯನಿರ್ವಹಿಸುತ್ತಿರುವ 32 ನಕಲಿ ವಿಶ್ವವಿದ್ಯಾಲಯಗಳನ್ನು ವಿಶ್ವವಿದ್ಯಾಲಯ ಅನುದಾನ ಆಯೋಗ (UGC) ಗುರುತಿಸಿದ್ದು, ಅವುಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ.

ರಾಜ್ಯಸಭೆಗೆ ಲಿಖಿತ ಉತ್ತರ ನೀಡಿದ ಶಿಕ್ಷಣ ಖಾತೆ ರಾಜ್ಯ ಸಚಿವ ಸುಕಾಂತ ಮಜುಂದಾರ್, ನಕಲಿ ವಿಶ್ವವಿದ್ಯಾಲಯಗಳ ಇತ್ತೀಚಿನ ಪಟ್ಟಿಯನ್ನು ಯುಜಿಸಿ ಫೆಬ್ರವರಿ 2026ರಲ್ಲಿ ಪ್ರಕಟಿಸಿದ್ದು, ಅದು ಯುಜಿಸಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿದೆ ಎಂದು ತಿಳಿಸಿದ್ದಾರೆ.

ವಿದ್ಯಾರ್ಥಿಗಳು ಇಂತಹ ಸ್ವಯಂ ಘೋಷಿತ ಸಂಸ್ಥೆಗಳಲ್ಲಿ ಪ್ರವೇಶ ಪಡೆಯದಂತೆ ಯುಜಿಸಿ ಈಗಾಗಲೇ ಶೋಕಾಸ್ ನೋಟಿಸ್, ಎಚ್ಚರಿಕೆ ಪತ್ರ ಹಾಗೂ ಸಾರ್ವಜನಿಕ ಸಲಹೆಗಳನ್ನು ಹೊರಡಿಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಕೇಂದ್ರ ಸರ್ಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳು ಹಾಗೂ ಶಿಕ್ಷಣ ಕಾರ್ಯದರ್ಶಿಗಳಿಗೆ ಪತ್ರ ಬರೆದು, ನಕಲಿ ವಿಶ್ವವಿದ್ಯಾಲಯಗಳ ವಿರುದ್ಧ ಕಾನೂನು ಕ್ರಮ ಆರಂಭಿಸಲು, ಎಫ್‌ಐಆರ್ ದಾಖಲಿಸಲು ಹಾಗೂ ಅಗತ್ಯವಿದ್ದರೆ ಅವುಗಳನ್ನು ಮುಚ್ಚಲು ಸೂಚಿಸಿದೆ.

ತಮ್ಮ ವ್ಯಾಪ್ತಿಯಲ್ಲಿ ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವ ನಕಲಿ ವಿಶ್ವವಿದ್ಯಾಲಯಗಳನ್ನು ಗುರುತಿಸಿ ಯುಜಿಸಿಗೆ ವರದಿ ಸಲ್ಲಿಸುವಂತೆ ರಾಜ್ಯಗಳಿಗೆ ಸೂಚಿಸಲಾಗಿದೆ. ಜೊತೆಗೆ, ಅಕ್ರಮವಾಗಿ ಪದವಿ ಪ್ರದಾನ ಮಾಡುವುದು ಹಾಗೂ ‘ವಿಶ್ವವಿದ್ಯಾಲಯ’ ಎಂಬ ಹೆಸರನ್ನು ದುರ್ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳನ್ನು ವಂಚಿಸುವ ಸಂಸ್ಥೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ.