Saturday, August 8

ಸೆ.1ರಿಂದ ತಮಿಳುನಾಡಿನ ಪ್ರಮುಖ ದೇವಾಲಯಗಳಲ್ಲಿ ಮೊಬೈಲ್ ಫೋನ್ ನಿರ್ಬಂಧ

ಚೆನ್ನೈ: ದೇವಾಲಯಗಳ ಪಾವಿತ್ರ್ಯ ಕಾಪಾಡುವುದು ಹಾಗೂ ಅನಧಿಕೃತ ಛಾಯಾಗ್ರಹಣ ಮತ್ತು ವೀಡಿಯೊಗ್ರಫಿಗೆ ಕಡಿವಾಣ ಹಾಕುವ ಉದ್ದೇಶದಿಂದ ಸೆಪ್ಟೆಂಬರ್ 1ರಿಂದ ತಮಿಳುನಾಡಿನ ಪ್ರಮುಖ ದೇವಾಲಯಗಳಲ್ಲಿ ಮೊಬೈಲ್ ಫೋನ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲು ಹಿಂದೂ ಧಾರ್ಮಿಕ ಮತ್ತು ದತ್ತಿ (HR&CE) ಇಲಾಖೆ ನಿರ್ಧರಿಸಿದೆ.

ದೇವಾಲಯಗಳಿಗೆ ಭೇಟಿ ನೀಡುವ ನಟರು, ರಾಜಕೀಯ ನಾಯಕರು ಹಾಗೂ ಇತರ ಗಣ್ಯರಿಗೆ ಸಂಬಂಧಿಸಿದ ನಿಯಮಗಳನ್ನೂ ಇಲಾಖೆ ಬಿಗಿಗೊಳಿಸಿದೆ. ಗಣ್ಯರ ಭೇಟಿಯಿಂದ ಸಾಮಾನ್ಯ ಭಕ್ತರಿಗೆ ತೊಂದರೆಯಾಗದಂತೆ ಹಾಗೂ ದರ್ಶನಕ್ಕೆ ಅಡ್ಡಿಯಾಗದಂತೆ ವ್ಯವಸ್ಥೆ ಮಾಡುವಂತೆ ದೇವಾಲಯ ಆಡಳಿತಗಳಿಗೆ ಸೂಚಿಸಲಾಗಿದೆ.

ಗಣ್ಯರ ಭೇಟಿಯ ಕುರಿತು ಕನಿಷ್ಠ ಒಂದು ದಿನ ಮುಂಚಿತವಾಗಿ HR&CE ಆಯುಕ್ತರಿಗೆ ಮಾಹಿತಿ ನೀಡಬೇಕು. ಭೇಟಿಯ ದಿನಾಂಕ, ಸಮಯ ಹಾಗೂ ಅವರೊಂದಿಗೆ ಬರುವವರ ಸಂಖ್ಯೆಯ ವಿವರಗಳನ್ನು ನೀಡಬೇಕಿದೆ. ತುರ್ತು ಭೇಟಿಗಳ ಸಂದರ್ಭದಲ್ಲೂ ತಕ್ಷಣ ಇಲಾಖೆಗೆ ಮಾಹಿತಿ ನೀಡಿ ಅಗತ್ಯ ವ್ಯವಸ್ಥೆ ಕಲ್ಪಿಸಬೇಕು.

ದೇವಾಲಯದ ಆವರಣದಲ್ಲಿ ಗಣ್ಯರ ಭೇಟಿಯ ವೇಳೆ ಛಾಯಾಗ್ರಹಣ ಮತ್ತು ವೀಡಿಯೊಗ್ರಫಿಗೂ ಅವಕಾಶ ಇರುವುದಿಲ್ಲ. ಗರ್ಭಗುಡಿ ಹಾಗೂ ದೇವಾಲಯದ ಆವರಣದಲ್ಲಿ ಫೋಟೋ, ವೀಡಿಯೊ, ರೀಲ್ಸ್ ಚಿತ್ರೀಕರಣ ತಡೆಯುವುದು ಮೊಬೈಲ್ ನಿಷೇಧದ ಪ್ರಮುಖ ಉದ್ದೇಶವಾಗಿದೆ.

ಭಕ್ತರು ದೇವಾಲಯ ಪ್ರವೇಶಿಸುವ ಮುನ್ನ ಮೊಬೈಲ್‌ಗಳನ್ನು ಸುರಕ್ಷಿತ ಠೇವಣಿ ಕೌಂಟರ್‌ಗಳಲ್ಲಿ ಇರಿಸಬೇಕು. ಈ ವ್ಯವಸ್ಥೆ ಕಲ್ಪಿಸಲು ದೇವಾಲಯಗಳಿಗೆ 20 ದಿನಗಳ ಕಾಲಾವಕಾಶ ನೀಡಲಾಗಿದೆ. ಠೇವಣಿ ಇಡುವ ಪ್ರತಿ ಮೊಬೈಲ್‌ಗೆ ₹5 ಶುಲ್ಕ ವಿಧಿಸಲಾಗುತ್ತದೆ. ITMS ಮೂಲಕ ರಶೀದಿ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.