
ನವದೆಹಲಿ: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ತನ್ನ ಡಿಜಿಟಲ್ FASTag ಲೋಕಲ್ ಪಾಸ್ ಸೌಲಭ್ಯವನ್ನು ದೇಶಾದ್ಯಂತ 121 ಟೋಲ್ ಪ್ಲಾಜಾಗಳಿಗೆ ವಿಸ್ತರಿಸಿದೆ. ಇದರಿಂದ ಅರ್ಹ ಸ್ಥಳೀಯ ವಾಹನ ಸವಾರರು ಟೋಲ್ ಪ್ಲಾಜಾಗೆ ತೆರಳಿ ದಾಖಲೆಗಳನ್ನು ಸಲ್ಲಿಸುವ ಅಗತ್ಯವಿಲ್ಲದೆ ಆನ್ಲೈನ್ನಲ್ಲಿ ಮಾಸಿಕ ಪಾಸ್ಗೆ ಅರ್ಜಿ ಸಲ್ಲಿಸಬಹುದು.
ಸೌಲಭ್ಯವು ರಾಜಮಾರ್ಗಯಾತ್ರೆ ಮೊಬೈಲ್ ಆ್ಯಪ್ ಮೂಲಕ ಲಭ್ಯವಿದ್ದು, ಅರ್ಹ ಟೋಲ್ ಪ್ಲಾಜಾದ 20 ಕಿ.ಮೀ. ವ್ಯಾಪ್ತಿಯಲ್ಲಿ ವಾಸಿಸುವವರು ಅರ್ಜಿ ಸಲ್ಲಿಸಬಹುದು. ಅನುಮೋದನೆಯ ಬಳಿಕ, ಅನ್ವಯವಾಗುವ ನಿಯಮಗಳಂತೆ ಮಾಸಿಕ ಪಾಸ್ ಮೂಲಕ ಟೋಲ್ ಪ್ಲಾಜಾದಲ್ಲಿ ಅನಿಯಮಿತ ಪ್ರಯಾಣಕ್ಕೆ ಅವಕಾಶ ಸಿಗಲಿದೆ.

ದಾಖಲೆ ಪರಿಶೀಲನೆ ಸಂಪೂರ್ಣ ಡಿಜಿಟಲ್
ಈ ಸೌಲಭ್ಯವನ್ನು ಜುಲೈ 2026ರಲ್ಲಿ ದೆಹಲಿಯ ಮುಂಡ್ಕಾ-ಬಕ್ಕರ್ವಾಲಾ ಟೋಲ್ ಪ್ಲಾಜಾದಲ್ಲಿ ಪ್ರಾರಂಭಿಸಲಾಗಿತ್ತು. ಇದೀಗ 121 ಪ್ಲಾಜಾಗಳಿಗೆ ವಿಸ್ತರಿಸಲಾಗಿದ್ದು, ಮುಂದಿನ ತಿಂಗಳುಗಳಲ್ಲಿ ಮತ್ತಷ್ಟು ಪ್ಲಾಜಾಗಳನ್ನು ಸೇರ್ಪಡೆಗೊಳಿಸಲು NHAI ಉದ್ದೇಶಿಸಿದೆ.
ಅರ್ಜಿದಾರರ ವಸತಿ ವಿಳಾಸ, ವಾಹನ ವಿವರ ಹಾಗೂ ಲಿಂಕ್ ಆಗಿರುವ FASTag ಪರಿಶೀಲನೆಗೆ DigiLocker ಮತ್ತು VAHAN ಸೇರಿದಂತೆ ಸರ್ಕಾರಿ ಡಿಜಿಟಲ್ ವೇದಿಕೆಗಳೊಂದಿಗೆ ಒಪ್ಪಿಗೆ ಆಧಾರಿತ ಏಕೀಕರಣ ಬಳಸಲಾಗುತ್ತಿದೆ.
ಅರ್ಜಿದಾರರು ಟೋಲ್ ಪ್ಲಾಜಾದ 20 ಕಿ.ಮೀ. ವ್ಯಾಪ್ತಿಯಲ್ಲಿ ವಾಸಿಸುತ್ತಾರೆಯೇ ಎಂಬುದನ್ನು GIS ಆಧಾರಿತ ವ್ಯವಸ್ಥೆಯ ಮೂಲಕ ಪರಿಶೀಲಿಸಲಾಗುತ್ತದೆ. ಇದರಿಂದ ಹಸ್ತಚಾಲಿತ ದಾಖಲೆ ಪರಿಶೀಲನೆ ಮತ್ತು ಮಾನವ ಹಸ್ತಕ್ಷೇಪ ಕಡಿಮೆಯಾಗಲಿದೆ.
ಅರ್ಹ ಟೋಲ್ ಪ್ಲಾಜಾಗಳ ಪಟ್ಟಿಯನ್ನು ಪರಿಶೀಲಿಸಿ ರಾಜಮಾರ್ಗಯಾತ್ರೆ ಲೋಕಲ್ ಪಾಸ್ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
