Wednesday, August 19

ಕೋಲ್ಕತ್ತಾ ಹೋಟೆಲ್‌ ಅಗ್ನಿ ಅವಘಡದಲ್ಲಿ 9 ಮಂದಿ ಸಾವು, ಪ್ರಧಾನಿ ಮೋದಿ ಸಂತಾಪ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿ ಬುಧವಾರ ಮುಂಜಾನೆ ಹೋಟೆಲ್‌ವೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಮಗು ಸೇರಿದಂತೆ ಕನಿಷ್ಠ 9 ಮಂದಿ ಮೃತಪಟ್ಟಿದ್ದಾರೆ. ನ್ಯೂ ಮಾರ್ಕೆಟ್ ಸಮೀಪದ ಫ್ರೀ ಸ್ಕೂಲ್ ಸ್ಟ್ರೀಟ್‌ನಲ್ಲಿರುವ ಹೋಟೆಲ್‌ನಲ್ಲಿ ಮುಂಜಾನೆ ಸುಮಾರು 2 ಗಂಟೆಗೆ ಬೆಂಕಿ ಕಾಣಿಸಿಕೊಂಡಿದೆ.

ಬೆಂಕಿ ಕಾಣಿಸಿಕೊಂಡ ವೇಳೆ ಹಲವು ಅತಿಥಿಗಳು ಕಟ್ಟಡದೊಳಗೆ ಸಿಲುಕಿಕೊಂಡಿದ್ದರು. ಮಾಹಿತಿ ತಿಳಿದ ತಕ್ಷಣ ನಾಲ್ಕು ಅಗ್ನಿಶಾಮಕ ವಾಹನಗಳು ಹಾಗೂ ವಿಪತ್ತು ನಿರ್ವಹಣಾ ತಂಡ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿತು. ಬಳಿಕ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು.

ಮೃತ 9 ಮಂದಿ ಬಾಂಗ್ಲಾದೇಶದ ಪ್ರಜೆಗಳಾಗಿದ್ದು, ವೈದ್ಯಕೀಯ ಚಿಕಿತ್ಸೆಗಾಗಿ ಕೋಲ್ಕತ್ತಾಗೆ ಬಂದಿದ್ದರು ಎಂದು ವರದಿಯಾಗಿದೆ. ಹವಾನಿಯಂತ್ರಣ (AC) ಘಟಕ ಸ್ಫೋಟಗೊಂಡಿರುವುದು ಬೆಂಕಿಗೆ ಕಾರಣವಾಗಿರಬಹುದು ಎಂದು ಪ್ರಾಥಮಿಕ ಮಾಹಿತಿ ತಿಳಿಸಿದ್ದು, ನಿಖರ ಕಾರಣ ಇನ್ನೂ ದೃಢಪಟ್ಟಿಲ್ಲ.

ಕೋಲ್ಕತ್ತಾ ಅಗ್ನಿ ದುರಂತಕ್ಕೆ ಪ್ರಧಾನಿ ಮೋದಿ ಸಂತಾಪ

ಘಟನೆಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಗಳಿಗೆ ಸಾಂತ್ವನ ಸೂಚಿಸಿರುವ ಅವರು, ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. ಸ್ಥಳೀಯ ಆಡಳಿತ ಸಂತ್ರಸ್ತರಿಗೆ ಅಗತ್ಯ ನೆರವು ನೀಡುತ್ತಿದೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ.

ಇದಕ್ಕೂ ಎರಡು ದಿನಗಳ ಹಿಂದೆ ಬೀರ್‌ಭೂಮ್ ಜಿಲ್ಲೆಯ ತಾರಾಪೀಠದ ಹೋಟೆಲ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಎಂಟು ಮಂದಿ ಮೃತಪಟ್ಟಿದ್ದರು.