
ಮುಂಬೈ: ಅನಿಮೇಷನ್, ವಿಷುವಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ಸ್ (AVGC) ಕ್ಷೇತ್ರದಲ್ಲಿ ಯುವ ಪ್ರತಿಭೆಗಳಿಗೆ ಉತ್ತೇಜನ ನೀಡಲು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕ್ರಿಯೇಟಿವ್ ಟೆಕ್ನಾಲಜೀಸ್ (IICT) ಮತ್ತು ನೆಟ್ಫ್ಲಿಕ್ಸ್ 100 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಘೋಷಿಸಿವೆ.
ಆರು ವೃತ್ತಿಪರ ಕಾರ್ಯಕ್ರಮಗಳಿಗೆ ಶೇ.80ರಷ್ಟು ಆರ್ಥಿಕ ನೆರವು ನೀಡಲಾಗುತ್ತಿದ್ದು, ಉದ್ಯಮಕ್ಕೆ ಅಗತ್ಯವಿರುವ ಕೌಶಲ್ಯಗಳನ್ನು ವಿದ್ಯಾರ್ಥಿಗಳು ಮತ್ತು ಕೆಲಸ ಮಾಡುವ ವೃತ್ತಿಪರರು ಪಡೆಯಲು ಈ ಯೋಜನೆ ನೆರವಾಗಲಿದೆ. ಎರಡು ಒಂದು ವರ್ಷದ ಡಿಪ್ಲೊಮಾ ಹಾಗೂ ನಾಲ್ಕು ಆರು ತಿಂಗಳ ಪ್ರಮಾಣಪತ್ರ ಕೋರ್ಸ್ಗಳು ಇದರ ವ್ಯಾಪ್ತಿಯಲ್ಲಿವೆ.
ಇಂಟರ್ಯಾಕ್ಟಿವ್ ಕಾಮಿಕ್ಸ್ ಆ್ಯಂಡ್ ಸೀಕ್ವೆನ್ಷಿಯಲ್ ಆರ್ಟ್ಸ್, ವಿಷುವಲ್ ಎಫೆಕ್ಟ್ಸ್ ಮಾಸ್ಟರಿ, ವರ್ಚುವಲ್ ಆರ್ಟ್ ಡಿಪಾರ್ಟ್ಮೆಂಟ್ ಕಂಟೆಂಟ್ ಕ್ರಿಯೇಷನ್, ಮೀಡಿಯಾ ಟೆಕ್ ವರ್ಕ್ಫ್ಲೋ, ಆರ್ಟ್ ಆಫ್ ಕ್ಯಾರೆಕ್ಟರ್ ಅನಿಮೇಷನ್ ಹಾಗೂ ಇ-ಸ್ಪೋರ್ಟ್ಸ್ ಆ್ಯಂಡ್ ಗೇಮಿಂಗ್ ಮ್ಯಾನೇಜ್ಮೆಂಟ್ ಪ್ರಮುಖ ಕಾರ್ಯಕ್ರಮಗಳಾಗಿವೆ.

ಆಗಸ್ಟ್ 5ರಂದು ಪ್ರಧಾನಿ ನರೇಂದ್ರ ಮೋದಿ ಅವರು ನೆಟ್ಫ್ಲಿಕ್ಸ್ ಸಹ-ಸಿಇಒ ಟೆಡ್ ಸರಾಂಡೋಸ್ ಅವರನ್ನು ಭೇಟಿಯಾದ ಬಳಿಕ ಈ ಸಹಯೋಗ ಮಹತ್ವ ಪಡೆದಿದೆ. ಭಾರತದ ಸೃಜನಶೀಲ ಪ್ರತಿಭೆ ಹಾಗೂ ಕಥೆ ಹೇಳುವ ಪರಂಪರೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಉದ್ದೇಶದಿಂದ ನೆಟ್ಫ್ಲಿಕ್ಸ್ನ ‘ಸ್ಟೋರಿ ಟೆಲ್ಲಿಂಗ್ ಇನಿಶಿಯೇಟಿವ್’ ಅಡಿಯಲ್ಲಿ ಈ ಕಾರ್ಯಕ್ರಮ ರೂಪಿಸಲಾಗಿದೆ.
IICTಯ ವಿಷುವಲ್ ಎಫೆಕ್ಟ್ಸ್ ಮಾಸ್ಟರಿ ಮತ್ತು ಮೀಡಿಯಾ ಟೆಕ್ ವರ್ಕ್ಫ್ಲೋ ಕೋರ್ಸ್ಗಳ ಪಠ್ಯಕ್ರಮವನ್ನು ನೆಟ್ಫ್ಲಿಕ್ಸ್ನ ಸಲಹೆಯೊಂದಿಗೆ ಉದ್ಯಮದ ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ರೂಪಿಸಲಾಗಿದೆ.
IICT ಅಧ್ಯಕ್ಷ ಚಂಚಲ್ ಕುಮಾರ್, ಈ ಸಹಯೋಗವು ಭಾರತದ ಸೃಜನಶೀಲ ಪ್ರತಿಭೆ ಮತ್ತು ಜಾಗತಿಕ AVGC-XR ಉದ್ಯಮದ ಬೇಡಿಕೆಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ನೆರವಾಗಲಿದೆ ಎಂದರು.
ಮುಂಬೈನ NFDC ಸಂಕೀರ್ಣದಿಂದ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ IICTಯ ಶಾಶ್ವತ 10 ಎಕರೆ ಕ್ಯಾಂಪಸ್ ಅನ್ನು ಗೋರೆಗಾಂವ್ ಫಿಲ್ಮ್ ಸಿಟಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ.
