
ನವದೆಹಲಿ: ಭಾರತದಲ್ಲಿ ಮಲೇರಿಯಾ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳು ಗಮನಾರ್ಹ ಫಲಿತಾಂಶ ನೀಡಿದ್ದು, 2015ರಿಂದ 2025ರ ಅವಧಿಯಲ್ಲಿ ಮಲೇರಿಯಾ ಪ್ರಕರಣಗಳು ಮತ್ತು ಸಾವುಗಳಲ್ಲಿ ಸುಮಾರು ಶೇ.80ರಷ್ಟು ಇಳಿಕೆಯಾಗಿದೆ. 2030ರ ವೇಳೆಗೆ ದೇಶದಿಂದ ಮಲೇರಿಯಾವನ್ನು ನಿರ್ಮೂಲನೆ ಮಾಡುವ ಗುರಿಯೊಂದಿಗೆ ಸರ್ಕಾರ ಪ್ರಯತ್ನಗಳನ್ನು ಮತ್ತಷ್ಟು ಚುರುಕುಗೊಳಿಸಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ದೇಶದಲ್ಲಿ ಹೆಚ್ಚಿನ ಮಲೇರಿಯಾ ಹೊರೆ ಹೊಂದಿರುವ ಜಿಲ್ಲೆಗಳ ಸಂಖ್ಯೆ 155ರಿಂದ 33ಕ್ಕೆ ಇಳಿಕೆಯಾಗಿದೆ. 2022ರಿಂದ 2025ರ ಅವಧಿಯಲ್ಲಿ 160 ಜಿಲ್ಲೆಗಳು ಸ್ಥಳೀಯ ಮಲೇರಿಯಾ ಪ್ರಕರಣಗಳು ಶೂನ್ಯವಾಗಿರುವುದನ್ನು ವರದಿ ಮಾಡಿವೆ.
ರಾಷ್ಟ್ರೀಯ ಆರೋಗ್ಯ ಮಿಷನ್ನ (NHM) ಮಿಷನ್ ನಿರ್ದೇಶಕಿ ಆರಾಧನಾ ಪಟ್ನಾಯಕ್ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಪರಿಶೀಲನಾ ಸಭೆಯಲ್ಲಿ ಒಂಬತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿರುವ 33 ಹೆಚ್ಚಿನ ಹೊರೆ ಜಿಲ್ಲೆಗಳ ಪರಿಸ್ಥಿತಿ ಕುರಿತು ಚರ್ಚಿಸಲಾಯಿತು. 2025ರಲ್ಲಿ ದೇಶದ ಒಟ್ಟು ಮಲೇರಿಯಾ ಪ್ರಕರಣಗಳ ಪೈಕಿ ಶೇ.64 ಹಾಗೂ ಮಲೇರಿಯಾ ಸಾವುಗಳ ಪೈಕಿ ಶೇ.54ರಷ್ಟು ಈ ಜಿಲ್ಲೆಗಳಲ್ಲೇ ದಾಖಲಾಗಿವೆ.
ಹೆಚ್ಚಿನ ಮಲೇರಿಯಾ ಹೊರೆ ಇರುವ ಪ್ರದೇಶಗಳಿಗೆ ಸ್ಥಳೀಯ ಪರಿಸ್ಥಿತಿಗೆ ಅನುಗುಣವಾದ ಕಾರ್ಯತಂತ್ರ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಜಿಲ್ಲಾ ಹಾಗೂ ಗ್ರಾಮ ಮಟ್ಟದ ಕ್ರಿಯಾ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಂತೆ ಕರೆ ನೀಡಲಾಗಿದೆ.

‘ಪರೀಕ್ಷೆ, ಚಿಕಿತ್ಸೆ ಮತ್ತು ಟ್ರ್ಯಾಕ್’ ವಿಧಾನಕ್ಕೆ ಸಭೆಯಲ್ಲಿ ವಿಶೇಷ ಒತ್ತು ನೀಡಲಾಗಿದೆ. ಆರಂಭಿಕ ಹಂತದಲ್ಲೇ ಮಲೇರಿಯಾವನ್ನು ಪತ್ತೆಹಚ್ಚುವುದು, ಸಂಪೂರ್ಣ ಚಿಕಿತ್ಸೆ ನೀಡುವುದು ಹಾಗೂ ಮಲೇರಿಯಾ ವಿರೋಧಿ ಔಷಧಿಗಳು ಮತ್ತು ರೋಗನಿರ್ಣಯ ಸೌಲಭ್ಯಗಳು, ವಿಶೇಷವಾಗಿ ದೂರದ ಪ್ರದೇಶಗಳಲ್ಲಿ, ನಿರಂತರವಾಗಿ ಲಭ್ಯವಾಗುವಂತೆ ನೋಡಿಕೊಳ್ಳಲು ರಾಜ್ಯಗಳಿಗೆ ಸೂಚಿಸಲಾಗಿದೆ.
ದತ್ತಾಂಶದ ಗುಣಮಟ್ಟ ಸುಧಾರಿಸುವುದು ಮತ್ತು ಮಲೇರಿಯಾ ಕಣ್ಗಾವಲು ಸೂಚಕಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುವ ಅಗತ್ಯವನ್ನೂ ಅಧಿಕಾರಿಗಳು ಒತ್ತಿಹೇಳಿದ್ದಾರೆ.
ಮಲೇರಿಯಾ ನಿರ್ಮೂಲನೆ ಆರೋಗ್ಯ ಇಲಾಖೆಯೊಂದರ ಪ್ರಯತ್ನದಿಂದ ಮಾತ್ರ ಸಾಧ್ಯವಿಲ್ಲ. ನೀರು ನಿಲ್ಲುವುದನ್ನು ತಡೆಗಟ್ಟುವುದು, ಸೊಳ್ಳೆಗಳ ಸಂತಾನೋತ್ಪತ್ತಿ ತಾಣಗಳನ್ನು ನಿರ್ಮೂಲನೆ ಮಾಡುವುದು ಹಾಗೂ ಪರಿಸರ ಸಂಬಂಧಿತ ಅಂಶಗಳನ್ನು ನಿಯಂತ್ರಿಸಲು ಗ್ರಾಮೀಣ ಮತ್ತು ನಗರಾಭಿವೃದ್ಧಿ ಇಲಾಖೆಗಳು, ಪಂಚಾಯತ್ ರಾಜ್ ಸಂಸ್ಥೆಗಳು ಸೇರಿದಂತೆ ವಿವಿಧ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಸಚಿವಾಲಯ ತಿಳಿಸಿದೆ.
ಸೊಳ್ಳೆಗಳ ಸಂತಾನೋತ್ಪತ್ತಿ ತಾಣಗಳನ್ನು ಗುರುತಿಸುವುದು ಹಾಗೂ ಜ್ವರದ ಪ್ರಕರಣಗಳನ್ನು ಆರಂಭಿಕ ಹಂತದಲ್ಲೇ ವರದಿ ಮಾಡುವಲ್ಲಿ ಸ್ವಸಹಾಯ ಗುಂಪುಗಳು, ಸಮುದಾಯ ಸ್ವಯಂಸೇವಕರು ಮತ್ತು ಸ್ಥಳೀಯ ಪ್ರತಿನಿಧಿಗಳ ಸಹಭಾಗಿತ್ವಕ್ಕೂ ಉತ್ತೇಜನ ನೀಡಲಾಗುತ್ತಿದೆ.
