
ನವದೆಹಲಿ: ಪರಿಷ್ಕೃತ ದೀನ್ ದಯಾಳ್ ಉಪಾಧ್ಯಾಯ–ಗ್ರಾಮೀಣ ಕೌಶಲ್ಯ ಯೋಜನೆ (DDU-GKY) 2.0 ಅಡಿಯಲ್ಲಿ ಅಕ್ಟೋಬರ್ 2026ರಿಂದ 14 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ 34,920 ಗ್ರಾಮೀಣ ಯುವಕರು ಕೌಶಲ ತರಬೇತಿ ಆರಂಭಿಸಲಿದ್ದಾರೆ.
ಗ್ರಾಮೀಣಾಭಿವೃದ್ಧಿ ಸಚಿವಾಲಯದ ಪ್ರಕಾರ, ಅಕ್ಟೋಬರ್ನಲ್ಲಿ ಒಡಿಶಾ, ಮಿಜೋರಾಂ, ಸಿಕ್ಕಿಂ, ಮಧ್ಯಪ್ರದೇಶ, ರಾಜಸ್ಥಾನ, ಪಶ್ಚಿಮ ಬಂಗಾಳ, ಹಿಮಾಚಲ ಪ್ರದೇಶ, ತಮಿಳುನಾಡು, ಉತ್ತರಾಖಂಡ, ಉತ್ತರ ಪ್ರದೇಶ, ಪುದುಚೇರಿ, ಕರ್ನಾಟಕ, ತೆಲಂಗಾಣ ಹಾಗೂ ಬಿಹಾರದಲ್ಲಿ ಒಟ್ಟು 1,164 ತರಬೇತಿ ಬ್ಯಾಚ್ಗಳು ಆರಂಭವಾಗಲಿವೆ.
ಈ 14 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಡಿಸೆಂಬರ್ 31, 2027ರೊಳಗೆ 3,57,112 ಗ್ರಾಮೀಣ ಯುವಕರಿಗೆ ತರಬೇತಿ ನೀಡುವ ಗುರಿ ನಿಗದಿಪಡಿಸಲಾಗಿದೆ.
ಕೇಂದ್ರ ಪ್ರಾಯೋಜಿತ DDU-GKY ಯೋಜನೆಯು ಗ್ರಾಮೀಣ ಪ್ರದೇಶದ ಬಡ ಯುವಕರಿಗೆ ಉದ್ಯೋಗಾವಕಾಶಕ್ಕೆ ಸಂಪರ್ಕ ಹೊಂದಿದ ಕೌಶಲ ತರಬೇತಿ ನೀಡುವ ಉದ್ದೇಶ ಹೊಂದಿದೆ. ಕೋರ್ಸ್ಗೆ ಅನುಗುಣವಾಗಿ ತರಬೇತಿಯ ಅವಧಿ ಮೂರು ತಿಂಗಳಿಂದ 12 ತಿಂಗಳವರೆಗೆ ಇರಲಿದೆ.

2026–28ರ ಅವಧಿಗೆ ದೇಶದ 31 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಗುರಿ ಹಂಚಿಕೆ ಮಾಡಲಾಗಿದೆ. ಯೋಜನೆ ಅನುಷ್ಠಾನ ಸಂಸ್ಥೆಗಳಿಗೆ (PIAs) ಈಗಾಗಲೇ ಐದು ಲಕ್ಷಕ್ಕೂ ಅಧಿಕ ತರಬೇತಿ ಗುರಿಗಳನ್ನು ಹಂಚಿಕೆ ಮಾಡಲಾಗಿದೆ. DDU-GKY 2.0 ಪೋರ್ಟಲ್ನಲ್ಲಿ 24 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 1,200ಕ್ಕೂ ಅಧಿಕ ಯೋಜನೆಗಳಡಿ ಒಟ್ಟು 5.6 ಲಕ್ಷ ಗುರಿ ಹಂಚಿಕೆಯಾಗಿದೆ.
ಅರ್ಹ ಯುವಕರನ್ನು ತ್ವರಿತವಾಗಿ ಕ್ರೋಢೀಕರಿಸಿ ತರಬೇತಿ ಬ್ಯಾಚ್ಗಳನ್ನು ಆರಂಭಿಸುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಚಿವಾಲಯ ಸೂಚಿಸಿದೆ. ಅಕ್ಟೋಬರ್ 31ರೊಳಗೆ PIAsಗೆ ಗುರಿ ಹಂಚಿಕೆ ಪೂರ್ಣಗೊಳಿಸುವಂತೆಯೂ ತಿಳಿಸಲಾಗಿದೆ.
ಯೋಜನೆಯ ಅನುಷ್ಠಾನದಲ್ಲಿ ಪಾರದರ್ಶಕತೆ ಹಾಗೂ ಮೇಲ್ವಿಚಾರಣೆ ಹೆಚ್ಚಿಸಲು DDU-GKY 2.0 ಸಮಗ್ರ ಪೋರ್ಟಲ್ ಬಳಕೆಗೆ ಒತ್ತು ನೀಡಲಾಗಿದೆ. ಗ್ರಾಮೀಣ ಕೌಶಲ ಪೋರ್ಟಲ್ ಮೂಲಕ ಆನ್ಲೈನ್ ಪಾವತಿಗೆ ಅನುಕೂಲವಾಗುವಂತೆ ರಾಜ್ಯ ಖಜಾನೆ ಪೋರ್ಟಲ್ಗಳ ಏಕೀಕರಣವನ್ನು ಸೆ.30ರೊಳಗೆ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ.
PIAಗಳಿಗೆ ಡಿಜಿಟಲ್ ವ್ಯವಸ್ಥೆಯ ಕುರಿತು ಅರಿವು ಮೂಡಿಸಲು ಅಕ್ಟೋಬರ್ನಲ್ಲಿ ಶಿಲ್ಲಾಂಗ್, ವಿಜಯವಾಡ, ಮುಂಬೈ ಮತ್ತು ಧರ್ಮಶಾಲಾದಲ್ಲಿ ಪ್ರಾದೇಶಿಕ ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತಿದೆ.
ಅಕ್ಟೋಬರ್ನಿಂದ ತರಬೇತಿ ಬ್ಯಾಚ್ಗಳು ಆರಂಭವಾಗಲಿರುವ ಹಿನ್ನೆಲೆಯಲ್ಲಿ ಯೋಜನೆಯ ವೆಚ್ಚ ಹೆಚ್ಚಾಗುವ ಸಾಧ್ಯತೆಯ ಬಗ್ಗೆಯೂ ಪರಿಶೀಲನಾ ಸಭೆಯಲ್ಲಿ ರಾಜ್ಯಗಳು ಗಮನ ಸೆಳೆದವು.
