Thursday, September 24

ಒಮಾನ್ ಕರಾವಳಿಯಲ್ಲಿ ಹಡಗಿನ ಮೇಲೆ ಕ್ಷಿಪಣಿ ದಾಳಿ: ಭಾರತೀಯ ನಾವಿಕ ಸಾವು

ನವದೆಹಲಿ: ಒಮಾನ್‌ನ ಪೂರ್ವ ಕರಾವಳಿಯ ಬಳಿ ವಾಣಿಜ್ಯ ಹಡಗು ಎಂವಿ ಕೇಪ್ ದಾವೋ ಮೇಲೆ ನಡೆದ ಕ್ಷಿಪಣಿ ದಾಳಿಯಲ್ಲಿ ಭಾರತೀಯ ನಾವಿಕರೊಬ್ಬರು ಮೃತಪಟ್ಟಿದ್ದು, ಘಟನೆಯನ್ನು ಭಾರತ ತೀವ್ರವಾಗಿ ಖಂಡಿಸಿದೆ.

ಮಧ್ಯಪ್ರಾಚ್ಯದಲ್ಲಿ ವಾಣಿಜ್ಯ ಹಡಗುಗಳು ಹಾಗೂ ನಾವಿಕರ ಮೇಲೆ ನಡೆಯುತ್ತಿರುವ ದಾಳಿಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA), ಹಡಗುಗಳು, ನಾವಿಕರು ಮತ್ತು ನಾಗರಿಕ ಮೂಲಸೌಕರ್ಯಗಳನ್ನು ಗುರಿಯಾಗಿಸುವ ದಾಳಿಗಳನ್ನು ತಕ್ಷಣವೇ ನಿಲ್ಲಿಸುವಂತೆ ಆಗ್ರಹಿಸಿದೆ.

ಹಡಗಿನಲ್ಲಿ ಒಟ್ಟು 20 ಭಾರತೀಯ ನಾವಿಕರಿದ್ದು, ಅವರ ಪೈಕಿ 19 ಮಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಓರ್ವ ಭಾರತೀಯ ಪ್ರಜೆ ದುರಂತವಾಗಿ ಮೃತಪಟ್ಟಿದ್ದಾರೆ. ಮೃತರ ಕುಟುಂಬಕ್ಕೆ ಭಾರತ ಸರ್ಕಾರ ಆಳವಾದ ಸಂತಾಪ ಸೂಚಿಸಿದೆ.

ಈ ಕುರಿತು ಭಾರತೀಯ ರಾಯಭಾರ ಕಚೇರಿ ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಮೃತ ನಾವಿಕರ ಕುಟುಂಬದೊಂದಿಗೆ ಸಂಪರ್ಕದಲ್ಲಿರುವುದಾಗಿ ತಿಳಿಸಿದೆ. ಅಲ್ಲದೆ, ಸಂಬಂಧಿತ ಆರ್‌ಪಿಎಸ್‌ಎಲ್‌ ಸಂಸ್ಥೆಯೊಂದಿಗೆ ಸಮನ್ವಯ ಸಾಧಿಸಲಾಗುತ್ತಿದೆ ಎಂದು ಹೇಳಿದೆ.

Our statement on the attack on a commercial vessel off the coast of Oman ⬇️

🔗 https://t.co/gXzupV0MKT pic.twitter.com/GcrLw0FFmy

— Randhir Jaiswal (@MEAIndia) September 23, 2026

ನಾವಿಕರ ಸುರಕ್ಷತೆಗೆ ಆದ್ಯತೆ

ರಕ್ಷಿಸಲ್ಪಟ್ಟ 19 ಭಾರತೀಯ ನಾವಿಕರನ್ನು ಶೀಘ್ರವಾಗಿ ಸ್ವದೇಶಕ್ಕೆ ಕರೆತರಲು ಮಸ್ಕತ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಒಮಾನ್ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಹಡಗಿನಲ್ಲಿದ್ದ ಎಲ್ಲ ಸಿಬ್ಬಂದಿಯ ಸುರಕ್ಷತೆಯ ಬಗ್ಗೆಯೂ ನಿಗಾ ವಹಿಸಲಾಗಿದೆ ಎಂದು MEA ತಿಳಿಸಿದೆ.

ಮಧ್ಯಪ್ರಾಚ್ಯದ ಅಂತಾರಾಷ್ಟ್ರೀಯ ಜಲಮಾರ್ಗಗಳಲ್ಲಿ ವಾಣಿಜ್ಯ ಹಡಗುಗಳ ಮೇಲೆ ದಾಳಿಗಳು ಮುಂದುವರಿಯುತ್ತಿರುವುದು ತೀವ್ರ ಆತಂಕಕಾರಿ ಎಂದು ಭಾರತ ಹೇಳಿದೆ.

ಪ್ರದೇಶದಲ್ಲಿ ಉದ್ವಿಗ್ನತೆ ಕಡಿಮೆ ಮಾಡಲು ಸಂವಾದ ಮತ್ತು ರಾಜತಾಂತ್ರಿಕ ಪ್ರಯತ್ನಗಳಿಗೆ ಭಾರತ ಮತ್ತೊಮ್ಮೆ ಕರೆ ನೀಡಿದೆ. ಶಾಂತಿ ಹಾಗೂ ಸ್ಥಿರತೆ ಶೀಘ್ರವಾಗಿ ಮರಳುವ ಅಗತ್ಯವಿದೆ ಎಂದು ತಿಳಿಸಿದೆ.

ಅಂತಾರಾಷ್ಟ್ರೀಯ ಜಲಮಾರ್ಗಗಳ ಮೂಲಕ ಮುಕ್ತ ಹಾಗೂ ಯಾವುದೇ ಅಡೆತಡೆಯಿಲ್ಲದ ನೌಕಾಯಾನ ಮತ್ತು ವಾಣಿಜ್ಯ ಸಂಚಾರವನ್ನು ಶೀಘ್ರವಾಗಿ ಪುನಃಸ್ಥಾಪಿಸಬೇಕು. ವಾಣಿಜ್ಯ ಹಡಗುಗಳು, ನಾವಿಕರು ಮತ್ತು ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿಯನ್ನು ಕೂಡಲೇ ನಿಲ್ಲಿಸಬೇಕು ಎಂದು ಭಾರತ ಒತ್ತಾಯಿಸಿದೆ.

ಘಟನೆಗೆ ಸಂಬಂಧಿಸಿದಂತೆ ಒಮಾನ್ ಅಧಿಕಾರಿಗಳು ನೀಡಿದ ಸಹಕಾರಕ್ಕೆ ಭಾರತ ಧನ್ಯವಾದ ಸಲ್ಲಿಸಿದ್ದು, ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿರುವುದಾಗಿ ವಿದೇಶಾಂಗ ಸಚಿವಾಲಯ ತಿಳಿಸಿದೆ.