Wednesday, September 30

SIR ವಿರುದ್ಧ INDIA ಒಕ್ಕೂಟದ ಹೋರಾಟ ತೀವ್ರ ಅ.2ರಿಂದ ‘ಪ್ರಜಾಪ್ರಭುತ್ವ ಉಳಿಸಿ’ ಮೆರವಣಿಗೆ; ಅ.6ರಂದು ಚುನಾವಣಾ ಆಯೋಗದತ್ತ ವಿಪಕ್ಷ ಸಂಸದರ ಪಾದಯಾತ್ರೆ

ನವದೆಹಲಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹಾಗೂ ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದ ವಿರುದ್ಧ INDIA ಮೈತ್ರಿಕೂಟದ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ. ಬುಧವಾರ ನಡೆದ ಪ್ರಮುಖ ವಿಪಕ್ಷ ನಾಯಕರ ಸಭೆಯಲ್ಲಿ ಜಂಟಿ ಹೋರಾಟದ ಕಾರ್ಯಯೋಜನೆ ಅಂತಿಮಗೊಂಡಿದ್ದು, ಅಕ್ಟೋಬರ್ 2ರಿಂದ 8ರವರೆಗೆ ದೇಶಾದ್ಯಂತ ‘ಪ್ರಜಾಪ್ರಭುತ್ವ ಉಳಿಸಿ’ ಮೆರವಣಿಗೆ ನಡೆಸಲು ನಿರ್ಧರಿಸಲಾಗಿದೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಡೆದ ಸುಮಾರು ಮೂರೂವರೆ ಗಂಟೆಗಳ ಸಭೆಯಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, ಎನ್‌ಸಿಪಿ (ಎಸ್‌ಪಿ) ಸಂಸದೆ ಸುಪ್ರಿಯಾ ಸುಳೆ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು.

ಸಭೆಯ ಬಳಿಕ ಮಾತನಾಡಿದ ಖರ್ಗೆ, ಅಕ್ಟೋಬರ್ 2ರಿಂದ 8ರವರೆಗೆ ಯುವಕರು ಹಾಗೂ ಸ್ವಯಂಸೇವಾ ಸಂಘಟನೆಗಳನ್ನು ಒಳಗೊಂಡಂತೆ ಜಿಲ್ಲಾ ಮಟ್ಟದಲ್ಲಿ ‘ಪ್ರಜಾಪ್ರಭುತ್ವ ಉಳಿಸಿ’ ಮೆರವಣಿಗೆಗಳನ್ನು ನಡೆಸಲಾಗುವುದು. ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿಗಳ ಎದುರು ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಅ.6ರಂದು ಚುನಾವಣಾ ಆಯೋಗದತ್ತ ಪಾದಯಾತ್ರೆ

ಅಕ್ಟೋಬರ್ 6ರಂದು INDIA ಮೈತ್ರಿಕೂಟದ ಎಲ್ಲ ವಿಪಕ್ಷ ಸಂಸದರು ಚುನಾವಣಾ ಆಯೋಗದ ಕಚೇರಿಯತ್ತ ಪ್ರತಿಭಟನಾ ಮೆರವಣಿಗೆ ನಡೆಸಲಿದ್ದಾರೆ ಎಂದು ಖರ್ಗೆ ತಿಳಿಸಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭೇಟಿಗೆ ಸಮಯ ಕೋರಿ, ಅಕ್ಟೋಬರ್ ಎರಡನೇ ವಾರದಲ್ಲಿ ಚುನಾವಣಾ ಪ್ರಕ್ರಿಯೆ ಕುರಿತ ತಮ್ಮ ಅಹವಾಲುಗಳನ್ನು ಸಲ್ಲಿಸಲು ನಾಯಕರು ನಿರ್ಧರಿಸಿದ್ದಾರೆ.

ಇದರ ಜತೆಗೆ ದೇಶಾದ್ಯಂತ ಐದು ಬೃಹತ್ ರ‍್ಯಾಲಿಗಳನ್ನು ನಡೆಸಲು ಮೈತ್ರಿಕೂಟ ನಿರ್ಧರಿಸಿದೆ. ರ‍್ಯಾಲಿಗಳ ದಿನಾಂಕ ಮತ್ತು ಸ್ಥಳವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಖರ್ಗೆ ಹೇಳಿದರು.

ಬ್ಯಾಲೆಟ್ ಪೇಪರ್‌ಗೆ ಒತ್ತಾಯ

ಇವಿಎಂ ಬದಲಿಗೆ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸಬೇಕು ಎಂಬ ಬೇಡಿಕೆಗೆ ಮೈತ್ರಿಕೂಟದ ಎಲ್ಲ ಪಕ್ಷಗಳು ಒಮ್ಮತ ಸೂಚಿಸಿವೆ ಎಂದು ಖರ್ಗೆ ಹೇಳಿದರು. ಎಸ್‌ಐಆರ್‌ಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಯನ್ನು ತ್ವರಿತಗೊಳಿಸುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡುವುದಾಗಿಯೂ ಅವರು ತಿಳಿಸಿದರು.

ಸಭೆಯಲ್ಲಿ ಭಾಗವಹಿಸಿದ್ದ ರಾಹುಲ್ ಗಾಂಧಿ, ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದ ವಿರುದ್ಧ ಆರೋಪಗಳನ್ನು ಮಾಡಿದರು. ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು ಎಂದು ಮಮತಾ ಬ್ಯಾನರ್ಜಿ ಆಗ್ರಹಿಸಿದರು.

ವಿಪಕ್ಷಗಳ ಆರೋಪಗಳಿಗೆ ಪ್ರತಿಯಾಗಿ ಚುನಾವಣಾ ಆಯೋಗವು SIR ಪ್ರಕ್ರಿಯೆಯನ್ನು ಕಾನೂನುಬದ್ಧ ಚುನಾವಣಾ ಪಟ್ಟಿಗಳ ಪರಿಷ್ಕರಣೆಯ ಭಾಗವೆಂದು ಸಮರ್ಥಿಸಿಕೊಂಡಿದೆ.

SIR, ಮತದಾರರ ಪಟ್ಟಿಗಳ ಪರಿಷ್ಕರಣೆ ಮತ್ತು ಚುನಾವಣಾ ವ್ಯವಸ್ಥೆಗೆ ಸಂಬಂಧಿಸಿದ ವಿವಾದಗಳು ಮುಂದುವರಿದಿರುವ ನಡುವೆಯೇ INDIA ಮೈತ್ರಿಕೂಟದ ಈ ಜಂಟಿ ಹೋರಾಟದ ಕಾರ್ಯಯೋಜನೆ ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ.