
ನವದೆಹಲಿ: ಭಾರತದ ಶಾಸ್ತ್ರೀಯ ಭಾಷೆ ಮತ್ತು ಸಾಹಿತ್ಯ ಪರಂಪರೆಯ ಸಂಶೋಧನೆ, ಸಂರಕ್ಷಣೆ ಹಾಗೂ ಪ್ರಸಾರವನ್ನು ಬಲಪಡಿಸುವ ಉದ್ದೇಶದಿಂದ ಐದು ಶ್ರೇಷ್ಠತಾ ಕೇಂದ್ರಗಳ (CoE) ಸ್ಥಾಪನೆಗೆ ಕೇಂದ್ರ ಶಿಕ್ಷಣ ಸಚಿವಾಲಯ ಅನುಮೋದನೆ ನೀಡಿದೆ.
ಶಾಸ್ತ್ರೀಯ ಅಸ್ಸಾಮೀಸ್, ಬಂಗಾಳಿ, ಮರಾಠಿ, ಪಾಲಿ ಮತ್ತು ಪ್ರಾಕೃತ ಭಾಷೆಗಳ ಅಧ್ಯಯನಕ್ಕೆ ಈ ಕೇಂದ್ರಗಳು ನೆರವಾಗಲಿವೆ. ಮುಂದುವರಿದ ಶೈಕ್ಷಣಿಕ ಸಂಶೋಧನೆ, ಸಾಹಿತ್ಯ ಸಂಪನ್ಮೂಲಗಳ ದಾಖಲೀಕರಣ, ಡಿಜಿಟಲೀಕರಣ ಹಾಗೂ ಭಾಷಾ ಪರಂಪರೆಯ ಪ್ರಸಾರಕ್ಕೆ ಆದ್ಯತೆ ನೀಡಲಾಗುತ್ತದೆ.

ಅಸ್ಸಾಮೀಸ್ ಭಾಷೆಗಾಗಿ ಅಸ್ಸಾಂನ ತೇಜ್‌ಪುರ ವಿಶ್ವವಿದ್ಯಾಲಯ, ಬಂಗಾಳಿಗಾಗಿ ಪಶ್ಚಿಮ ಬಂಗಾಳದ ವಿಶ್ವಭಾರತಿ ವಿಶ್ವವಿದ್ಯಾಲಯ, ಮರಾಠಿಗಾಗಿ ಪುಣೆಯ ಡೆಕ್ಕನ್ ಕಾಲೇಜು ಸ್ನಾತಕೋತ್ತರ ಮತ್ತು ಸಂಶೋಧನಾ ಸಂಸ್ಥೆ, ಪಾಲಿಗಾಗಿ ಒಡಿಶಾ ಕೇಂದ್ರ ವಿಶ್ವವಿದ್ಯಾಲಯ ಹಾಗೂ ಪ್ರಾಕೃತಕ್ಕಾಗಿ ಗುಜರಾತ್ ಕೇಂದ್ರ ವಿಶ್ವವಿದ್ಯಾಲಯದಲ್ಲಿ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ.
ಈ ಕೇಂದ್ರಗಳು ಶಾಸ್ತ್ರೀಯ ಭಾಷೆಗಳ ಅಧ್ಯಯನಕ್ಕೆ ಸಾಂಸ್ಥಿಕ ಬೆಂಬಲ ಒದಗಿಸುವುದರ ಜತೆಗೆ, ಪುರಾತನ ಸಾಹಿತ್ಯ ಮತ್ತು ಜ್ಞಾನ ಪರಂಪರೆಯನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯ ಕೈಗೊಳ್ಳಲಿವೆ. ಸಂಶೋಧಕರು ಮತ್ತು ವಿದ್ಯಾರ್ಥಿಗಳಿಗೆ ವಿಶೇಷ ಅಧ್ಯಯನ ಹಾಗೂ ಶೈಕ್ಷಣಿಕ ಚಟುವಟಿಕೆಗಳಿಗೆ ವೇದಿಕೆ ಕಲ್ಪಿಸಲಿವೆ.
ಐದು ರಾಜ್ಯಗಳಲ್ಲಿ ಸ್ಥಾಪನೆಯಾಗಲಿರುವ ಈ ಕೇಂದ್ರಗಳು ಪ್ರಾದೇಶಿಕ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಜಾಲವನ್ನು ಬಲಪಡಿಸುವ ನಿರೀಕ್ಷೆಯಿದೆ. ಭಾರತದ ಭಾಷಾ ವೈವಿಧ್ಯ ಮತ್ತು ಸಾಹಿತ್ಯಿಕ ಪರಂಪರೆಯನ್ನು ಉತ್ತೇಜಿಸುವ ಸರ್ಕಾರದ ಪ್ರಯತ್ನದ ಭಾಗವಾಗಿ ಈ ಉಪಕ್ರಮ ಕೈಗೊಳ್ಳಲಾಗಿದೆ.
