Thursday, October 15

ಬಿಹಾರದಲ್ಲಿ ಗಂಗಾ ನದಿಯಲ್ಲಿ ದೋಣಿ ಮುಳುಗಡೆ: 11 ಮಂದಿ ಸಾವು

ಪಟನಾ: ಬಿಹಾರದ ವೈಶಾಲಿ ಜಿಲ್ಲೆಯ ಹಾಜಿಪುರ ಸಮೀಪ ಗಂಗಾ ನದಿಯಲ್ಲಿ ದೋಣಿ ಮುಳುಗಿ 11 ಮಂದಿ ಮೃತಪಟ್ಟಿದ್ದಾರೆ. ದುರಂತದಲ್ಲಿ ಐವರನ್ನು ರಕ್ಷಣಾ ಪಡೆಗಳು ರಕ್ಷಿಸಿದ್ದು, ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಜಿಲ್ಲೆಯ ರಾಂಪುರ ಶ್ಯಾಮಚಂದ್ ಗ್ರಾಮದ ಸಮೀಪ ರಘೋಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸುಮಾರು 15ರಿಂದ 20 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ದೋಣಿ ನದಿಯ ಮಧ್ಯಭಾಗದಲ್ಲಿ ನಿಯಂತ್ರಣ ತಪ್ಪಿ ತಲೆಕೆಳಗಾಗಿ ಮುಳುಗಿದೆ ಎಂದು ವರದಿಯಾಗಿದೆ.

ನದಿಯ ಮತ್ತೊಂದು ದಂಡೆಯಲ್ಲಿ ಆಯೋಜಿಸಲಾಗಿದ್ದ ಭೋಜನಕೂಟದಲ್ಲಿ ಭಾಗವಹಿಸಲು ಪ್ರಯಾಣಿಕರು ದೋಣಿಯಲ್ಲಿ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.

ಘಟನೆ ತಿಳಿಯುತ್ತಿದ್ದಂತೆ ಸ್ಥಳೀಯ ಆಡಳಿತ ಹಾಗೂ ರಕ್ಷಣಾ ಪಡೆಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದವು. ಐವರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದ್ದು, ನದಿಯಲ್ಲಿ ಇನ್ನೂ ಯಾರಾದರೂ ನಾಪತ್ತೆಯಾಗಿದ್ದಾರೆಯೇ ಎಂಬುದನ್ನು ಪತ್ತೆಹಚ್ಚಲು ಶೋಧ ನಡೆಸಲಾಗುತ್ತಿದೆ.

ಗಂಗಾ ನದಿಯಲ್ಲಿ ಸಂಭವಿಸಿದ ದೋಣಿ ದುರಂತದಲ್ಲಿ 11 ಮಂದಿ ಮೃತಪಟ್ಟಿರುವುದನ್ನು ವೈಶಾಲಿ ಜಿಲ್ಲಾಧಿಕಾರಿ ದೃಢಪಡಿಸಿದ್ದಾರೆ.