Wednesday, October 14

‘ಸಬಲೀಕರಣಕ್ಕೆ ಶಕ್ತಿ’ಯೇ ಭಾರತದ ಮಂತ್ರ: ಬ್ಲೂಮ್‌ಬರ್ಗ್ ನ್ಯೂ ಎಕಾನಮಿ ಫೋರಂನಲ್ಲಿ ಪ್ರಧಾನಿ ಮೋದಿ ಪ್ರತಿಪಾದನೆ

ನವದೆಹಲಿ: ಭಾರತದ ಅಭಿವೃದ್ಧಿ ದೃಷ್ಟಿಕೋನವು ದೇಶದ ಪ್ರಗತಿಗೆ ಮಾತ್ರ ಸೀಮಿತವಾಗಿಲ್ಲ; ಜಾಗತಿಕ ಸಮುದಾಯಕ್ಕೂ ಹೊಸ ಅವಕಾಶಗಳನ್ನು ಸೃಷ್ಟಿಸುವ ಗುರಿ ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಮಂಗಳವಾರ ನವದೆಹಲಿಯಲ್ಲಿ ನಡೆದ ಬ್ಲೂಮ್‌ಬರ್ಗ್ ನ್ಯೂ ಎಕಾನಮಿ ಫೋರಂ ಉದ್ದೇಶಿಸಿ ಮಾತನಾಡಿದ ಅವರು, ನಿಯಂತ್ರಣದ ಬದಲಿಗೆ ಸಬಲೀಕರಣ, ಸ್ಪರ್ಧೆಯ ಬದಲಿಗೆ ಸಹಯೋಗ ಹಾಗೂ ವೈಯಕ್ತಿಕ ಯಶಸ್ಸಿನ ಜತೆಗೆ ಇತರರ ಪ್ರಗತಿಗೂ ನೆರವಾಗುವ ಮನೋಭಾವ ಬೆಳೆಸಿಕೊಳ್ಳುವಂತೆ ಕರೆ ನೀಡಿದರು.

“ನಾನು ಸಬಲೀಕರಣಕ್ಕೆ ಶಕ್ತಿಯೊಂದಿಗೆ ಬಂದಿದ್ದೇನೆ” ಎಂದು ಹೇಳಿದ ಮೋದಿ, ಭಾರತದ ಅಭಿವೃದ್ಧಿ ಮಾದರಿಯ ಪ್ರಮುಖ ಅಂಶವಾಗಿ ಅವಕಾಶಗಳ ವಿಸ್ತರಣೆ ಮತ್ತು ಜನರ ಸಬಲೀಕರಣವನ್ನು ಬಿಂಬಿಸಿದರು.

ಭಾರತದ ಡಿಜಿಟಲ್ ಪರಿವರ್ತನೆಯನ್ನು ಉಲ್ಲೇಖಿಸಿದ ಪ್ರಧಾನಿ, ಕೈಗೆಟುಕುವ ಇಂಟರ್ನೆಟ್, ಡಿಜಿಟಲ್ ಪಾವತಿ ವ್ಯವಸ್ಥೆ ಮತ್ತು ನೇರ ನಗದು ವರ್ಗಾವಣೆ ಯೋಜನೆಗಳು ಜನರಿಗೆ ವಿವಿಧ ಸೇವೆಗಳು ಹಾಗೂ ಸರ್ಕಾರಿ ಸೌಲಭ್ಯಗಳನ್ನು ತಲುಪಿಸುವಲ್ಲಿ ನೆರವಾಗಿವೆ ಎಂದರು.

ದೇಶದ ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆಯು 2.5 ಲಕ್ಷಕ್ಕೂ ಅಧಿಕ ಉದ್ಯಮಗಳಿಗೆ ವಿಸ್ತರಿಸಿದ್ದು, ಅವುಗಳಲ್ಲಿ ಸುಮಾರು ಅರ್ಧದಷ್ಟು ಸಣ್ಣ ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು. ಸ್ಟಾರ್ಟ್‌ಅಪ್‌ಗಳ ನಾಯಕತ್ವದ ಹುದ್ದೆಗಳಲ್ಲಿ ಶೇ 45ಕ್ಕಿಂತ ಹೆಚ್ಚು ಮಹಿಳೆಯರು ಇರುವುದನ್ನೂ ಅವರು ಪ್ರಸ್ತಾಪಿಸಿದರು.

ಜೆನೆರಿಕ್ ಔಷಧಗಳ ಲಭ್ಯತೆ, ಡಿಜಿಟಲ್ ಮೂಲಸೌಕರ್ಯ ಹಾಗೂ ಅಂತರರಾಷ್ಟ್ರೀಯ ಸೌರ ಒಕ್ಕೂಟ ಮತ್ತು ಜಾಗತಿಕ ಜೈವಿಕ ಇಂಧನ ಒಕ್ಕೂಟದಂತಹ ಉಪಕ್ರಮಗಳ ಮೂಲಕ ಭಾರತ ಜಾಗತಿಕ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದೆ ಎಂದು ಮೋದಿ ಹೇಳಿದರು.

“ನಾವು ಯಾರ ವೆಚ್ಚದಲ್ಲಿಯೂ ಬೆಳೆಯುವುದಿಲ್ಲ. ಜಗತ್ತಿನೊಂದಿಗೆ ಮತ್ತು ಜಗತ್ತಿಗಾಗಿ ಬೆಳೆಯುತ್ತೇವೆ” ಎಂದು ಹೇಳಿದ ಅವರು, ಜಾಗತಿಕ ಸಂಘರ್ಷಗಳು ಮತ್ತು ಪೂರೈಕೆ ಸರಪಳಿಯ ಅಡೆತಡೆಗಳ ನಡುವೆ ವಿಶ್ವಾಸಾರ್ಹ ಪಾಲುದಾರಿಕೆಗಳ ಮಹತ್ವವನ್ನು ಒತ್ತಿಹೇಳಿದರು.

ಹವಾಮಾನ ಬದಲಾವಣೆ ಎದುರಿಸುವ ಪ್ರಯತ್ನಗಳ ಕುರಿತು ಮಾತನಾಡಿದ ಮೋದಿ, ಭಾರತದ ನವೀಕರಿಸಬಹುದಾದ ಇಂಧನ ಸಾಮರ್ಥ್ಯವು 2014ರಲ್ಲಿ 75 ಗಿಗಾವಾಟ್‌ನಷ್ಟಿದ್ದದ್ದು ಸುಮಾರು 300 ಗಿಗಾವಾಟ್‌ಗೆ ಏರಿಕೆಯಾಗಿದೆ ಎಂದು ಹೇಳಿದರು. ಮನೆಗಳು ಮತ್ತು ರೈತರಿಗೆ ಸೌರಶಕ್ತಿಯ ಪ್ರಯೋಜನಗಳನ್ನು ತಲುಪಿಸುವ ಯೋಜನೆಗಳ ಬಗ್ಗೆಯೂ ಪ್ರಸ್ತಾಪಿಸಿದರು.

ಏಪ್ರಿಲ್‌ನಿಂದ ಜೂನ್‌ವರೆಗಿನ ತ್ರೈಮಾಸಿಕದಲ್ಲಿ ದಾಖಲಾದ ಶೇ 7.8ರ ಆರ್ಥಿಕ ಬೆಳವಣಿಗೆ ಹಾಗೂ 700 ಶತಕೋಟಿ ಡಾಲರ್‌ ಮೀರಿದ ವಿದೇಶಿ ವಿನಿಮಯ ಮೀಸಲುಗಳನ್ನು ಉಲ್ಲೇಖಿಸಿದ ಅವರು, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಹಾಗೂ ಕಾರ್ಮಿಕ ಕಾನೂನುಗಳಲ್ಲಿನ ಬದಲಾವಣೆ ಸೇರಿದಂತೆ ರಚನಾತ್ಮಕ ಸುಧಾರಣೆಗಳು ಆರ್ಥಿಕತೆಯ ಸ್ಥಿತಿಸ್ಥಾಪಕತ್ವಕ್ಕೆ ನೆರವಾಗಿವೆ ಎಂದರು.

“ನಮಗೆ ಸುಧಾರಣೆಗಳು ಕೇವಲ ಅನಿವಾರ್ಯತೆಯಲ್ಲ; ಅವು ನಮ್ಮ ದೃಢನಿಶ್ಚಯದ ಭಾಗ” ಎಂದು ಹೇಳಿದ ಪ್ರಧಾನಿ, ಜಾಗತಿಕ ಸವಾಲುಗಳನ್ನು ಎದುರಿಸಲು ಮತ್ತು ಪರಸ್ಪರ ಹಿತಾಸಕ್ತಿಯ ಅವಕಾಶಗಳನ್ನು ಸೃಷ್ಟಿಸಲು ರಾಷ್ಟ್ರಗಳು ಸಹಕರಿಸಬೇಕು ಎಂದು ಕರೆ ನೀಡಿದರು.