Saturday, August 8

E20 ಪೆಟ್ರೋಲ್ ಸುರಕ್ಷಿತ; 500 ppm ಕ್ಲೋರೈಡ್ ಆರೋಪ ತಳ್ಳಿಹಾಕಿದ ತೈಲ ಕಂಪನಿಗಳು

ನವದೆಹಲಿ: E20 ಪೆಟ್ರೋಲ್‌ನಲ್ಲಿ ಹೆಚ್ಚಿನ ಪ್ರಮಾಣದ ಕ್ಲೋರೈಡ್ ಮತ್ತು ತೇವಾಂಶ ಮಾಲಿನ್ಯವಿದೆ ಎಂಬ ಆರೋಪಗಳನ್ನು ತೈಲ ಮಾರುಕಟ್ಟೆ ಕಂಪನಿಗಳು (OMC) ತಳ್ಳಿಹಾಕಿವೆ. ದೇಶಾದ್ಯಂತ ನಡೆಸಿದ ವ್ಯಾಪಕ ಪರೀಕ್ಷೆಗಳಲ್ಲಿ ಇಂಧನದ ಗುಣಮಟ್ಟ ನಿಗದಿತ ಮಾನದಂಡಗಳಲ್ಲೇ ಇರುವುದು ದೃಢಪಟ್ಟಿದೆ ಎಂದು ಕಂಪನಿಗಳು ತಿಳಿಸಿವೆ.

E20 ಪೆಟ್ರೋಲ್‌ನಲ್ಲಿ 500 ppm ವರೆಗೆ ಕ್ಲೋರೈಡ್ ಮತ್ತು ತೇವಾಂಶ ಇದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಹೆಚ್ಚುವರಿ ಪರೀಕ್ಷೆಗಳನ್ನು ನಡೆಸಲಾಗಿದೆ. ಸಂಸ್ಕರಣಾಗಾರದಿಂದ ಚಿಲ್ಲರೆ ಮಾರಾಟ ಮಳಿಗೆಗಳವರೆಗೆ ಸಂಪೂರ್ಣ ಪೂರೈಕೆ ಸರಪಳಿಯಲ್ಲಿ ವೈಜ್ಞಾನಿಕ ವಿಧಾನದಲ್ಲಿ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸಲಾಗಿದೆ ಎಂದು OMCಗಳು ಹೇಳಿವೆ.

ಸಂಸ್ಕರಣಾಗಾರಗಳಿಂದ ಸಂಗ್ರಹಿಸಿದ 100ಕ್ಕೂ ಹೆಚ್ಚು ಪೆಟ್ರೋಲ್ ಮಾದರಿಗಳಲ್ಲಿ ಕ್ಲೋರೈಡ್ ಪ್ರಮಾಣ 1 ppm ಅಥವಾ ಅದಕ್ಕಿಂತ ಕಡಿಮೆ ಇತ್ತು. ಇದೇ ವೇಳೆ, OMCಗಳು ಮತ್ತು ಸೆಂಟರ್ ಫಾರ್ ಹೈ ಟೆಕ್ನಾಲಜಿ (CHT) ಪ್ರತಿನಿಧಿಗಳನ್ನೊಳಗೊಂಡ ಕಾರ್ಯಪಡೆ ಕಳೆದ 10 ದಿನಗಳಲ್ಲಿ 80 ಡಿಸ್ಟಿಲರಿಗಳಿಂದ ಎಥೆನಾಲ್ ಮಾದರಿಗಳನ್ನು ಪರೀಕ್ಷಿಸಿದ್ದು, ಎಲ್ಲ ಮಾದರಿಗಳಲ್ಲೂ ಕ್ಲೋರೈಡ್ ಪ್ರಮಾಣ 3 ppmಗಿಂತ ಕಡಿಮೆ ಕಂಡುಬಂದಿದೆ.

ಡಿಪೋಗಳು ಮತ್ತು ಟರ್ಮಿನಲ್‌ಗಳಿಂದ ಪರೀಕ್ಷಿಸಲಾದ 80ಕ್ಕೂ ಹೆಚ್ಚು ಮಾದರಿಗಳಲ್ಲಿಯೂ ಕ್ಲೋರೈಡ್ ಪ್ರಮಾಣ 3 ppmಗಿಂತ ಕಡಿಮೆಯಿತ್ತು.

ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ 1,000ಕ್ಕೂ ಹೆಚ್ಚು ಮಾದರಿಗಳನ್ನು ಪರೀಕ್ಷಿಸಲಾಗುತ್ತಿದ್ದು, ಈವರೆಗೆ ವಿಶ್ಲೇಷಿಸಿದ 160 ವರದಿಗಳಲ್ಲಿ ಕ್ಲೋರೈಡ್ ಪ್ರಮಾಣ 0ರಿಂದ 3 ppm ವ್ಯಾಪ್ತಿಯಲ್ಲಿದೆ. ಕೆಲವು ಕಡೆ ನಾಲ್ಕು ಪ್ರತ್ಯೇಕ ಪ್ರಕರಣಗಳು ಪತ್ತೆಯಾಗಿದ್ದು, ತನಿಖೆ ಮತ್ತು ಅಗತ್ಯ ಕ್ರಮಕ್ಕಾಗಿ ಸಂಬಂಧಿತ ಇಂಧನ ಪೂರೈಕೆಯನ್ನು ತಕ್ಷಣ ಸ್ಥಗಿತಗೊಳಿಸಲಾಗಿದೆ ಎಂದು ಕಂಪನಿಗಳು ತಿಳಿಸಿವೆ.

ದೇಶಾದ್ಯಂತ ಸುಮಾರು 90,000 ಪೆಟ್ರೋಲ್ ಬಂಕ್‌ಗಳ ಭೂಗತ ಸಂಗ್ರಹ ಟ್ಯಾಂಕ್‌ಗಳ ಕಡ್ಡಾಯ ಮೇಲ್ವಿಚಾರಣೆ ಆರಂಭಿಸಲಾಗಿದೆ. ದಿನಕ್ಕೆ 8ರಿಂದ 12 ಬಾರಿ ಪರಿಶೀಲನೆ ನಡೆಸಲಾಗುತ್ತಿದ್ದು, ಈವರೆಗೆ ಯಾವುದೇ ನೀರು ಒಳನುಗ್ಗಿರುವುದು ಪತ್ತೆಯಾಗಿಲ್ಲ ಎಂದು OMCಗಳು ಹೇಳಿವೆ.

ಗುಣಮಟ್ಟದ ಮೇಲ್ವಿಚಾರಣೆಯನ್ನು ಮತ್ತಷ್ಟು ಬಲಪಡಿಸಲು ಮೊಬೈಲ್ ಪರೀಕ್ಷಾ ಪ್ರಯೋಗಾಲಯಗಳು ಮತ್ತು ಸ್ವತಂತ್ರ ಇಂಧನ ಪ್ರಯೋಗಾಲಯಗಳನ್ನು ಬಳಸಲಾಗುತ್ತಿದೆ. ಗ್ರಾಹಕರು ಯಾವುದೇ ಆತಂಕವಿಲ್ಲದೆ E20 ಪೆಟ್ರೋಲ್ ಬಳಸುವುದನ್ನು ಮುಂದುವರಿಸಬಹುದು ಎಂದು ತೈಲ ಕಂಪನಿಗಳು ಭರವಸೆ ನೀಡಿವೆ.