Friday, October 9

174 ಪ್ರಯಾಣಿಕರ ಜೀವ ಉಳಿಸಿದ ಕ್ಯಾಪ್ಟನ್ ಸ್ಮಿತ್ ಮಚ್ಚರ್‌ಗೆ ಇಸ್ರೇಲ್‌ನ ನಾಗರಿಕ ಶೌರ್ಯ ಪ್ರಶಸ್ತಿ

ಇಸ್ರೇಲ್: ಫ್ಲೈದುಬೈ ವಿಮಾನದಲ್ಲಿ 174 ಪ್ರಯಾಣಿಕರು ಮತ್ತು ಸಿಬ್ಬಂದಿಯ ಜೀವ ಉಳಿಸಲು ಧೈರ್ಯದಿಂದ ಹೋರಾಡಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರಿಗೆ ಇಸ್ರೇಲ್‌ನ ಪ್ರತಿಷ್ಠಿತ ನಾಗರಿಕ ಶೌರ್ಯ ಪ್ರಶಸ್ತಿ ಪ್ರದಾನ ಮಾಡಲು ನಿರ್ಧರಿಸಲಾಗಿದೆ.

ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಜಾಗ್ ಈ ಘೋಷಣೆ ಮಾಡಿದ್ದು, ಕ್ಯಾಪ್ಟನ್ ಮಚ್ಚರ್ ಸಂಪೂರ್ಣವಾಗಿ ಚೇತರಿಸಿಕೊಂಡ ಬಳಿಕ ಪ್ರಶಸ್ತಿ ಪ್ರದಾನ ಮಾಡುವುದಾಗಿ ತಿಳಿಸಿದ್ದಾರೆ.

“ಕ್ಯಾಪ್ಟನ್ ಮಚ್ಚರ್ ಅವರ ಸಂಪೂರ್ಣ ಚೇತರಿಕೆಗೆ ಹಾರೈಸುತ್ತೇನೆ. ಅವರ ಅಸಾಧಾರಣ ಧೈರ್ಯ ಮತ್ತು ವೃತ್ತಿಪರತೆಯಿಂದ ದೊಡ್ಡ ದುರಂತವನ್ನು ತಪ್ಪಿಸಲು ಸಾಧ್ಯವಾಗಿದೆ. ಅವರು ಚೇತರಿಸಿಕೊಂಡ ಬಳಿಕ ಇಸ್ರೇಲ್ ಜನರ ಪರವಾಗಿ ನಾಗರಿಕ ಶೌರ್ಯಕ್ಕಾಗಿ ನೀಡುವ ಅಧ್ಯಕ್ಷೀಯ ಪ್ರಶಸ್ತಿಯನ್ನು ಪ್ರದಾನ ಮಾಡುವುದು ಗೌರವದ ವಿಷಯ,” ಎಂದು ಹೆರ್ಜಾಗ್ ಹೇಳಿದ್ದಾರೆ.

ವಿಮಾನದಲ್ಲಿದ್ದ ಪ್ರಯಾಣಿಕನ ದಾಳಿಯನ್ನು ತಡೆಯಲು ನೆರವಾದ ಐವರು ಇಸ್ರೇಲಿ ನಾಗರಿಕರಿಗೂ ಅಧ್ಯಕ್ಷರು ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.