
ನವದೆಹಲಿ: ಹಿರಿಯ ನಾಗರಿಕರ ರಾಷ್ಟ್ರೀಯ ಸಹಾಯವಾಣಿ ‘ಎಲ್ಡರ್ಲೈನ್ 14567’ 2021ರ ಅಕ್ಟೋಬರ್ನಲ್ಲಿ ಆರಂಭವಾದ ಬಳಿಕ ಇದುವರೆಗೆ 29 ಲಕ್ಷಕ್ಕೂ ಹೆಚ್ಚು ಕರೆಗಳನ್ನು ಸ್ವೀಕರಿಸಿದೆ. ಈ ಪೈಕಿ 8.67 ಲಕ್ಷಕ್ಕೂ ಹೆಚ್ಚು ಕರೆಗಳಲ್ಲಿ ಮಾಹಿತಿ, ಮಾರ್ಗದರ್ಶನ, ಭಾವನಾತ್ಮಕ ಬೆಂಬಲ ಅಥವಾ ಕ್ಷೇತ್ರಮಟ್ಟದ ಮಧ್ಯಸ್ಥಿಕೆಯ ಅಗತ್ಯವಿದ್ದು, ಕ್ರಮ ಕೈಗೊಳ್ಳಲಾಗಿದೆ ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ತಿಳಿಸಿದೆ.
32 ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೇವೆ
2021ರ ಅಕ್ಟೋಬರ್ 1ರಂದು ಆರಂಭವಾದ ಉಚಿತ ಸಹಾಯವಾಣಿ ‘ಅಟಲ್ ವಯೋ ಅಭ್ಯುದಯ ಯೋಜನೆ’ (AVYAY) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ 32 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೇವೆ ಲಭ್ಯವಿದೆ.
ರಾಷ್ಟ್ರೀಯ ಸಾಮಾಜಿಕ ರಕ್ಷಣಾ ಸಂಸ್ಥೆ (NISD) ಈ ಕಾರ್ಯಕ್ರಮದ ಮೇಲ್ವಿಚಾರಣೆ ನಡೆಸುತ್ತಿದ್ದು, 2021ರ ಹಣಕಾಸು ವರ್ಷದಿಂದ ಸೆ.21, 2026ರವರೆಗೆ 8.67 ಲಕ್ಷಕ್ಕೂ ಹೆಚ್ಚು ಕ್ರಮ ಅಗತ್ಯವಿದ್ದ ಕರೆಗಳನ್ನು ನಿರ್ವಹಿಸಲಾಗಿದೆ ಎಂದು ಹಿರಿಯ ನಾಗರಿಕರ ವಿಭಾಗದ ಜಂಟಿ ಕಾರ್ಯದರ್ಶಿ ಸಜೀಶ್ ಕುಮಾರ್ ಎನ್. ತಿಳಿಸಿದ್ದಾರೆ.

ಹಿರಿಯ ನಾಗರಿಕರ ಸಮಸ್ಯೆಯ ಸ್ವರೂಪಕ್ಕೆ ಅನುಗುಣವಾಗಿ ‘ಎಲ್ಡರ್ಲೈನ್’ ಮಾಹಿತಿ, ಮಾರ್ಗದರ್ಶನ, ಭಾವನಾತ್ಮಕ ಬೆಂಬಲ ಹಾಗೂ ಸಮಾಲೋಚನೆ ಒದಗಿಸುತ್ತದೆ. ಅಗತ್ಯವಿದ್ದಲ್ಲಿ ಕ್ಷೇತ್ರಮಟ್ಟದ ಮಧ್ಯಸ್ಥಿಕೆಯನ್ನೂ ಸಂಯೋಜಿಸುತ್ತದೆ.
ದೂರಿನ ಸ್ವರೂಪಕ್ಕೆ ಅನುಗುಣವಾಗಿ ರಾಜ್ಯ ಸಮಾಜ ಕಲ್ಯಾಣ ಇಲಾಖೆ, ಪೊಲೀಸ್, ಆರೋಗ್ಯ ಸಂಸ್ಥೆಗಳು, ಕಾನೂನು ನೆರವು ಸೇವೆಗಳು, ಹಿರಿಯ ನಾಗರಿಕರ ಆಶ್ರಯ ತಾಣಗಳು ಸೇರಿದಂತೆ ವಿವಿಧ ಸ್ಥಳೀಯ ಸಂಸ್ಥೆಗಳೊಂದಿಗೆ ಸಹಾಯವಾಣಿ ಸಮನ್ವಯ ಸಾಧಿಸುತ್ತದೆ.
ಸಹಾಯವಾಣಿಯ ಉದ್ದೇಶ ಹಿರಿಯ ನಾಗರಿಕರಿಗೆ ನೇರ ಆರ್ಥಿಕ ನೆರವು ನೀಡುವುದಕ್ಕಿಂತ ಸಂಘಟಿತ ಬೆಂಬಲ ವ್ಯವಸ್ಥೆ ಮತ್ತು ಅಗತ್ಯ ಸೇವೆಗಳಿಗೆ ಸಂಪರ್ಕ ಕಲ್ಪಿಸುವುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೂರದ ಪ್ರದೇಶಗಳಲ್ಲಿರುವ ಹಿರಿಯ ನಾಗರಿಕರಿಗೂ ಸೇವೆ ತಲುಪಿಸುವ ನಿಟ್ಟಿನಲ್ಲಿ ಡಿಜಿಟಲ್ ಸೇವೆ, ಜಾಗೃತಿ ಕಾರ್ಯಕ್ರಮಗಳು, ಸೇವೆಗಳ ಲಭ್ಯತೆ ಹಾಗೂ ಸ್ಥಳೀಯ ಅಧಿಕಾರಿಗಳೊಂದಿಗೆ ಸಮನ್ವಯವನ್ನು ಸಚಿವಾಲಯ ಪರಿಶೀಲಿಸುತ್ತಿದೆ.
ಮಾಹಿತಿ, ಮಾರ್ಗದರ್ಶನ, ಭಾವನಾತ್ಮಕ ಬೆಂಬಲ ಅಥವಾ ಸಂಬಂಧಿತ ಸೇವೆಗಳಿಗಾಗಿ ಹಿರಿಯ ನಾಗರಿಕರು ಉಚಿತ ಸಂಖ್ಯೆ 14567ಕ್ಕೆ ಕರೆ ಮಾಡಬಹುದು. ಅಗತ್ಯಕ್ಕೆ ಅನುಗುಣವಾಗಿ ಸೇವೆಗಳು ಮತ್ತು ಸಂಬಂಧಿತ ಸಂಸ್ಥೆಗಳಿಗೆ ಶಿಫಾರಸುಗಳನ್ನು ಸಹಾಯವಾಣಿ ಒದಗಿಸುತ್ತದೆ.
