Sunday, October 18

ದೀಪಾವಳಿಗೆ ಪ್ರಭಾಸ್ ‘ಸ್ಪಿರಿಟ್’ ಅಬ್ಬರ; ;‘ರಾಮಾಯಣ ಭಾಗ 2’ ಜೊತೆ ಬಾಕ್ಸ್ ಆಫೀಸ್ ಪೈಪೋಟಿ ಸಾಧ್ಯತೆ

ಮುಂಬೈ: ನಟ ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ಆ್ಯಕ್ಷನ್ ಸಿನಿಮಾ ‘ಸ್ಪಿರಿಟ್’ ಬಿಡುಗಡೆ ದಿನಾಂಕ ಪ್ರಕಟವಾಗಿದೆ. ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಈ ಚಿತ್ರ 2027ರ ಅಕ್ಟೋಬರ್ 29ರಂದು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಚಿತ್ರಮಂದಿರಗಳಿಗೆ ಬರಲಿದೆ. ಹೊಸ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದೆ.

‘ಸ್ಪಿರಿಟ್’ನಲ್ಲಿ ಪ್ರಭಾಸ್‌ಗೆ ನಾಯಕಿಯಾಗಿ ತೃಪ್ತಿ ದಿಮ್ರಿ ನಟಿಸುತ್ತಿದ್ದಾರೆ. ವಿವೇಕ್ ಒಬೆರಾಯ್, ಕಾಂಚನಾ ಮತ್ತು ಐಶ್ವರ್ಯಾ ದೇಸಾಯಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಟಿ-ಸೀರೀಸ್ ಫಿಲ್ಮ್ಸ್ ಮತ್ತು ಭದ್ರಕಾಳಿ ಪಿಕ್ಚರ್ಸ್ ಬ್ಯಾನರ್‌ಗಳಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೆ ಭೂಷಣ್ ಕುಮಾರ್ ಸೇರಿದಂತೆ ಪ್ರಮುಖ ನಿರ್ಮಾಪಕರು ಬಂಡವಾಳ ಹೂಡಿದ್ದಾರೆ.

‘ಸ್ಪಿರಿಟ್’ ಮೂಲಕ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಮೊದಲ ಬಾರಿಗೆ ಪ್ರಭಾಸ್ ಜೊತೆ ಕೈಜೋಡಿಸಿದ್ದಾರೆ. ‘ಅನಿಮಲ್’ ಚಿತ್ರದ ಬಳಿಕ ತೃಪ್ತಿ ದಿಮ್ರಿ ಜೊತೆ ವಂಗಾ ಮತ್ತೊಮ್ಮೆ ಕೆಲಸ ಮಾಡುತ್ತಿದ್ದಾರೆ ಎಂಬುದು ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಿದೆ.

Check this out…….. 😊
#Spirit
#InSpiritMode
@TSeries
@VangaPictures
#IndiasBiggestSuperStar
29TH OCTOBER DIWALI 2027 💥
Worldwide RELEASE DATE 👆 https://t.co/SmPjKHzuVE

— Sandeep Reddy Vanga (@imvangasandeep) October 18, 2026

ಆರಂಭದಲ್ಲಿ 2027ರ ಮಾರ್ಚ್‌ನಲ್ಲಿ ಬಿಡುಗಡೆ ಮಾಡಲು ಯೋಜಿಸಲಾಗಿದ್ದ ಚಿತ್ರವನ್ನು ಕಾರಣಾಂತರಗಳಿಂದ ಮುಂದೂಡಲಾಗಿತ್ತು. ಇದೀಗ ಹೊಸ ದಿನಾಂಕ ಘೋಷಣೆಯಾಗಿದ್ದು, ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿದೆ.

ಇದೇ ಅವಧಿಯಲ್ಲಿ ರಣಬೀರ್ ಕಪೂರ್ ಮತ್ತು ಯಶ್ ಅಭಿನಯದ ‘ರಾಮಾಯಣ ಭಾಗ 2’ ಚಿತ್ರವು 2027ರ ನವೆಂಬರ್ 5ರಂದು ಬಿಡುಗಡೆಯಾಗುವ ನಿರೀಕ್ಷೆಯಿದೆ. ಹೀಗಾಗಿ, ದೀಪಾವಳಿ ಸಂದರ್ಭದಲ್ಲಿ ಬಿಡುಗಡೆಯಾಗಲಿರುವ ಈ ಎರಡು ಬಹುನಿರೀಕ್ಷಿತ ಚಿತ್ರಗಳ ನಡುವೆ ಬಾಕ್ಸ್ ಆಫೀಸ್ ಪೈಪೋಟಿ ನಡೆಯುವ ಸಾಧ್ಯತೆ ಸಿನಿಪ್ರಿಯರ ಗಮನ ಸೆಳೆದಿದೆ.