
ನವದೆಹಲಿ: ದಕ್ಷಿಣ ಭಾರತದ ನಾಲ್ಕು ರಾಜ್ಯಗಳಲ್ಲಿ ರೈಲ್ವೆ ಮೂಲಸೌಕರ್ಯ ವಿಸ್ತರಣೆಗೆ ಕೇಂದ್ರ ಸರ್ಕಾರ ₹10,021 ಕೋಟಿ ವೆಚ್ಚದ ಐದು ಮಲ್ಟಿಟ್ರ್ಯಾಕಿಂಗ್ ಯೋಜನೆಗಳಿಗೆ ಬುಧವಾರ ಅನುಮೋದನೆ ನೀಡಿದೆ. ಇದರಿಂದ ಒಟ್ಟು 540 ಕಿ.ಮೀ. ರೈಲು ಮಾರ್ಗ ಸೇರ್ಪಡೆಯಾಗಲಿದ್ದು, ಕರ್ನಾಟಕಕ್ಕೆ 194 ಕಿ.ಮೀ. ಮಾರ್ಗದ ಎರಡು ಯೋಜನೆಗಳು ದೊರೆಯಲಿವೆ.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿ (ಸಿಸಿಇಎ) ಸಭೆಯಲ್ಲಿ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. 2029-30ರ ವೇಳೆಗೆ ಕಾಮಗಾರಿಗಳನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.
ಕರ್ನಾಟಕದ ಎರಡು ಯೋಜನೆಗಳು
ಕರ್ನಾಟಕದಲ್ಲಿ ವೈಟ್‌ಫೀಲ್ಡ್–ಬಂಗಾರಪೇಟೆ ಮೂರನೇ ಮತ್ತು ನಾಲ್ಕನೇ ಮಾರ್ಗ 47 ಕಿ.ಮೀ. ಹಾಗೂ ಹೊಸೂರು–ಓಮಲೂರು ಮಲ್ಟಿಟ್ರ್ಯಾಕಿಂಗ್ ಯೋಜನೆ 147 ಕಿ.ಮೀ. ಉದ್ದವಿದೆ. ದಟ್ಟಣೆಯನ್ನು ಕಡಿಮೆ ಮಾಡಿ ರೈಲು ಸಂಚಾರದ ವೇಗ ಮತ್ತು ಕಾರ್ಯಾಚರಣೆಯ ದಕ್ಷತೆ ಹೆಚ್ಚಿಸಲು ಈ ಕಾಮಗಾರಿಗಳು ನೆರವಾಗಲಿವೆ.
ಉಳಿದ ಯೋಜನೆಗಳಲ್ಲಿ ಅರಕ್ಕೋಣಂ–ರೇಣಿಗುಂಟ 77 ಕಿ.ಮೀ. ಮೂರನೇ ಮತ್ತು ನಾಲ್ಕನೇ ಮಾರ್ಗ, ಸೇಲಂ–ಕರೂರ್–ದಿಂಡಿಗಲ್ 159 ಕಿ.ಮೀ. ದ್ವಿಗುಣ ಮಾರ್ಗ ಹಾಗೂ ಸಿಕಂದರಾಬಾದ್ (ಘಾಟ್ಕೇಸರ್)–ಕಾಜಿಪೇಟೆ 110 ಕಿ.ಮೀ. ಮಲ್ಟಿಟ್ರ್ಯಾಕಿಂಗ್ ಕಾಮಗಾರಿಗಳು ಸೇರಿವೆ.

ಯೋಜನೆಗಳು ಒಟ್ಟು 17 ಜಿಲ್ಲೆಗಳು ಮತ್ತು ಸುಮಾರು 2,121 ಗ್ರಾಮಗಳನ್ನು ಒಳಗೊಂಡಿದ್ದು, ಸುಮಾರು 52 ಲಕ್ಷ ಜನರಿಗೆ ರೈಲು ಸಂಪರ್ಕ ಸುಧಾರಿಸಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ತಿರುಪತಿ, ತಿರುತ್ತಣಿ, ಕೋಲಾರ ಚಿನ್ನದ ಗಣಿ, ಹೊಗೆನಕಲ್, ಹೊಸೂರು, ಕೊಡೈಕನಾಲ್, ಸತ್ಯಮಂಗಲಂ, ನಾಮಕ್ಕಲ್, ಯಾದಗಿರಿಗುಟ್ಟ ಮತ್ತು ಭೋಂಗಿರ್ ಸೇರಿದಂತೆ ಪ್ರಮುಖ ಪ್ರವಾಸಿ ಹಾಗೂ ಧಾರ್ಮಿಕ ಸ್ಥಳಗಳ ಸಂಪರ್ಕವೂ ಸುಧಾರಿಸಲಿದೆ.
ಕಲ್ಲಿದ್ದಲು, ಸಿಮೆಂಟ್, ಕಬ್ಬಿಣ–ಉಕ್ಕು, ಕಂಟೇನರ್, ಆಟೋಮೊಬೈಲ್, ಆಹಾರ ಧಾನ್ಯ, ಪೆಟ್ರೋಲಿಯಂ ಉತ್ಪನ್ನ ಮತ್ತು ರಸಗೊಬ್ಬರ ಸಾಗಣೆಗೆ ಈ ಮಾರ್ಗಗಳು ಪ್ರಮುಖವಾಗಿವೆ. ಹೆಚ್ಚುವರಿ ರೈಲು ಸಾಮರ್ಥ್ಯದಿಂದ ವಾರ್ಷಿಕ ಸುಮಾರು 4.7 ಕೋಟಿ ಟನ್ ಸರಕು ಸಾಗಣೆ ಸಾಧ್ಯವಾಗಲಿದೆ ಎಂದು ಅಂದಾಜಿಸಲಾಗಿದೆ.
ಪ್ರಧಾನಮಂತ್ರಿ ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಅಡಿಯಲ್ಲಿ ಯೋಜನೆಗಳನ್ನು ರೂಪಿಸಲಾಗಿದೆ. ರೈಲು ಜಾಲ ವಿಸ್ತರಣೆಯಿಂದ ಇಂಧನ ಬಳಕೆ ಮತ್ತು ಇಂಗಾಲದ ಹೊರಸೂಸುವಿಕೆ ಕಡಿಮೆಯಾಗಲಿದ್ದು, ವರ್ಷಕ್ಕೆ ಸುಮಾರು 8 ಕೋಟಿ ಲೀಟರ್ ತೈಲ ಆಮದು ಉಳಿತಾಯ ಹಾಗೂ 42 ಕೋಟಿ ಕೆ.ಜಿ. ಕಾರ್ಬನ್ ಡೈಆಕ್ಸೈಡ್ ಹೊರಸೂಸುವಿಕೆ ಕಡಿತವಾಗಲಿದೆ ಎಂದು ಕೇಂದ್ರ ತಿಳಿಸಿದೆ.
