
ಹನೂರು: ತಾಲ್ಲೂಕಿನಲ್ಲಿ ದಿನಾಂಕ 14.08.1992 ಮಿಣ್ಯ ದಾಳಿಯಲ್ಲಿ ವೀರಪ್ಪನ್ ನಿಂದ ಹುತಾತ್ಮರಾದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳಿಗೆ ಶ್ರದ್ಧಾಂಜಲಿ ಸಭೆಯನ್ನು ಮಾಡಲಾಯಿತು.
ದಾಳಿಯಲ್ಲಿ ಹುತಾತ್ಮರಾದ ಪೊಲೀಸ್ ಅಧಿಕಾರಿಗಳಿಗೆ ರಾಮಾಪರ ವೃತ್ತ ನಿರೀಕ್ಷಕರಾದ ಚಿಕ್ಕರಂಗ ಶೆಟ್ಟಿ, ಸಬ್ ಇನ್ಸ್ಪೆಕ್ಟರ್ ಮಂಜುನಾಥ್ ಹಾಗೂ ಹುತಾತ್ಮ ಅಧಿಕಾರಿಗಳ ಸಂಬಂಧಿಕರು ಸ್ಮಾರಕ ಸ್ತಂಭಕ್ಕೆ ಪೂಜೆ ಸಲ್ಲಿಸಿ ಪುಷ್ಪರ್ಚನೆ ಮಾಡಿ ಶ್ರದ್ದಾಂಜಲಿ ಅರ್ಪಿಸಿದರು.

ಈ ವೇಳೆ ವೃತ್ತ ನಿರೀಕ್ಷಕರಾದ ಚಿಕ್ಕರಂಗಶೆಟ್ಟಿ ಮಾತನಾಡಿ ಇತಿಹಾಸವನ್ನು ಮೆಲಕು ಹಾಕಿದರು. ಈ ದಿನ ಎಲ್ಲರಿಗೂ ನೋವುಂಟು ಮಾಡುವ ದಿನವಾಗಿದೆ. ವೀರಪ್ಪನ್ ಕಾರ್ಯಾಚರಣೆಯಲ್ಲಿ ಕಮಲ ನಾಯಕ್ ಎಂಬ ಗುಪ್ತ ಮಾಹಿತಿದಾರನ ಕುತಂತ್ರ ಮೋಸ ಮತ್ತು ನಂಬಿಕೆ ದ್ರೋಹದಿಂದ ಇಂತಹ ಯುವ ಪೊಲೀಸ್ ಪಡೆಗಳನ್ನು ಕಳೆದುಕೊಳ್ಳುವಂತಹ ಸ್ಥಿತಿ ನಿರ್ಮಾಣವಾಯಿತು. ಪೊಲೀಸ್ ಮಾಹಿತಿದಾರನಂತೆ ಕೆಲಸ ಮಾಡುತ್ತಿದ್ದು, ಒಳಗೆ ವೀರಪ್ಪನ್ ಸಹಚರನಾಗಿರುವುದು ಪೊಲೀಸರಿಗೆ ತಿಳಿದಿರಲಿಲ್ಲ . ವೀರಪ್ಪನ್ ಒಳಸಂಚಿನಂತೆ ಕಮಲ ನಾಯಕ್ ಕೆಂಪು ಬಟ್ಟೆ ಧರಿಸಿ ಬಂದಿದ್ದರು. ಕಾರ್ಯಾಚರಣೆ ವೇಳೆ ಮಿಣ್ಯಂ ಅರಣ್ಯ ಪ್ರದೇಶದಲ್ಲಿ ಜೀಪ್ ಇಳಿದು ಓಡಿಬಿಟ್ಟ. ನಂತರ ವೀರಪ್ಪನ್ ಸಹಚರರು ಗುಂಡಿನ ದಾಳಿ ನಡೆಸಿದರು. ಕಮಲಾ ನಾಯಕ್ ಎಂಬ ಕುತಂತ್ರ ಬುದ್ಧಿಯಿಂದ ಎಸ್. ಟಿ. ಎಫ್.ಪೊಲೀಸ್ ವರಿಷ್ಠಾಧಿಕಾರಿ ಹರಿಕೃಷ್ಣ ಸೇರಿದಂತೆ ಶಕೀಲ್ ಅಹಮದ್, ಅಪ್ಪಚ್ಚು, ಸುಂದರ್, ಕಾಳಪ್ಪ, ಸೋಮಪ್ಪ ಬೆನಗೊಂಡ ಅಧಿಕಾರಿಗಳು, ಸಿಬ್ಬಂದಿಗಳು ಹುತಾತ್ಮರಾದರು ಎಂದು ಸ್ಮರಿಸಿದರು.
ಈ ಸಂದರ್ಭದಲ್ಲಿ ಸಬ್ ಇನ್ಸ್ಪೆಕ್ಟರ್ ಮಂಜುನಾಥ್, ಹುತಾತ್ಮ ಪೊಲೀಸರಾದ ಕಾಳಪ್ಪರವರ ಕುಟುಂಬ ವರ್ಗದವರು ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿಗಳಾದ ಮಂಜು, ರಾಮಕೃಷ್ಣ ಇನ್ನಿತರರು ಉಪಸ್ಥಿತರಿದ್ದರು.
