
ವಾಷಿಂಗ್ಟನ್: ರಷ್ಯಾ ಮತ್ತು ಉಕ್ರೇನ್ ನಡುವೆ ತಕ್ಷಣದಿಂದ ಜಾರಿಗೆ ಬರುವಂತೆ ಇಂಧನ ಕ್ಷೇತ್ರಕ್ಕೆ ಸಂಬಂಧಿಸಿದ ಕದನವಿರಾಮ ಒಪ್ಪಂದ ಏರ್ಪಟ್ಟಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಎರಡೂ ದೇಶಗಳು ಇದಕ್ಕೆ ಒಪ್ಪಿಗೆ ಸೂಚಿಸಿವೆ ಎಂದು ಅವರು ‘ಟ್ರೂತ್ ಸೋಶಿಯಲ್’ ಜಾಲತಾಣದಲ್ಲಿ ತಿಳಿಸಿದ್ದಾರೆ. ಒಪ್ಪಂದವನ್ನು ಉಲ್ಲಂಘಿಸದಂತೆ ಮಾಸ್ಕೋ ಮತ್ತು ಕೈವ್ಗೆ ಮನವಿ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ಕದನವಿರಾಮದ ಘೋಷಣೆಯನ್ನು ಸ್ವಾಗತಿಸಿದ್ದಾರೆ. ಆದರೆ, ಒಪ್ಪಂದವು ವಾಸ್ತವದಲ್ಲಿ ಜಾರಿಯಾಗುವುದು ಮುಖ್ಯ ಎಂದು ಹೇಳಿದ್ದಾರೆ.
ಉಕ್ರೇನ್ ಮೇಲೆ ರಷ್ಯಾದ ಡ್ರೋನ್ ಮತ್ತು ಗ್ಲೈಡ್ ಬಾಂಬ್ ದಾಳಿಗಳು ಮುಂದುವರಿದಿವೆ. ಖಾರ್ಕಿವ್ನ ವಿದ್ಯುತ್ ಸ್ಥಾವರದ ಮೇಲೂ ದಾಳಿ ನಡೆದಿದೆ ಎಂದು ಝೆಲೆನ್ಸ್ಕಿ ತಿಳಿಸಿದ್ದಾರೆ.

ಕಳೆದ ಒಂದು ವಾರದಲ್ಲಿ ಉಕ್ರೇನ್ನ ವಿದ್ಯುತ್ ಉತ್ಪಾದನೆ ಮತ್ತು ಪ್ರಸರಣ ಘಟಕಗಳ ಮೇಲೆ 200ಕ್ಕೂ ಹೆಚ್ಚು ದಾಳಿಗಳು ನಡೆದಿವೆ. ಅನಿಲ ಮತ್ತು ತೈಲ ಘಟಕಗಳನ್ನೂ ಗುರಿಯಾಗಿಸಿಕೊಂಡು 17 ದಾಳಿಗಳನ್ನು ನಡೆಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಈ ದಾಳಿಗಳಲ್ಲಿ 150ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 700ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದಿದ್ದಾರೆ.
ಉಕ್ರೇನ್ ಶಾಂತಿಯನ್ನು ಬಯಸುತ್ತದೆ. ರಷ್ಯಾ ಕೂಡ ಅದಕ್ಕೆ ಸಿದ್ಧವಿದೆಯೇ ಎಂಬುದೇ ಪ್ರಶ್ನೆ ಎಂದು ಹೇಳಿರುವ ಝೆಲೆನ್ಸ್ಕಿ, ಅಮೆರಿಕ ಮತ್ತು ರಷ್ಯಾ ನಡುವಿನ ಮಾತುಕತೆಯ ವಿವರಗಳಿಗಾಗಿ ಕಾಯುತ್ತಿರುವುದಾಗಿ ತಿಳಿಸಿದ್ದಾರೆ. ಕದನವಿರಾಮ ಘೋಷಣೆಯನ್ನು ರಷ್ಯಾ ಪಾಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
