Sunday, May 3

‘ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ’: ಪೊಲೀಸ್ ಕಮಿಷನರ್ ಅಮಾನತು ಬಗ್ಗೆ ವಿಜಯೇಂದ್ರ ಕಿಡಿ

ಬೆಂಗಳೂರು: RCB ವಿಜಯೋತ್ಸವದ ಹೆಸರಿನಲ್ಲಿ ಸಂದರ್ಭದ ಲಾಭ ಪಡೆಯುವ ಕೆಟ್ಟ ಸ್ವಾರ್ಥದ ಫಲವಾಗಿ 11 ಅಮಾಯಕ ಜೀವಗಳ ಬಲಿಯಾಗಿದೆ. ಸಾವಿರಾರು ಜನರು ಸಂಕಟ ಅನುಭವಿಸಿದ್ದಾರೆ. ಇಂದು ಉಚ್ಚ ನ್ಯಾಯಾಲಯ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಪರಿಗಣಿಸಿ ವಿಚಾರಣೆಯನ್ನು ಕೈಗೆತ್ತಿಕೊಂಡಿದೆ. ಈ ಸಂದರ್ಭದಲ್ಲಿ ನೈತಿಕ ಹೊಣೆ ಹೊತ್ತು ರಾಜಿನಾಮೆ ಕೊಡಬೇಕಾದ ಮುಖ್ಯಮಂತ್ರಿ ಉಪ ಮುಖ್ಯಮಂತ್ರಿ ಹಾಗೂ ಗೃಹಸಚಿವರು ‘ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರುʼ ಎಂಬಂತೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಹಾಗೂ ಇತರ ಅಧಿಕಾರಿಗಳನ್ನು ಅಮಾನತುಗೊಳಿಸಿರುವುದು ಸರ್ಕಾರದ ನಿರ್ಲಜ್ಜ ಹಾಗೂ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಬಹುದು ಎಂಬ ದುರಾಲೋಚನೆಯ ಕ್ರಮವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.

ಕರ್ನಾಟಕದ ಜನತೆ ಮಮ್ಮಲ ಮರುಗುತ್ತಿದ್ದಾರೆ, ಜನರ ಆಕ್ರೋಶ ಮುಗಿಲು ಮುಟ್ಟಿದೆ, ಮನೆ ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮಾನವೀಯತೆ ಇರುವವರ ಕರುಳು ಹಿಂಡುತ್ತಿದೆ ಎಂದಿರುವ ವಿಜಯೇಂದ್ರ, ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಕಾಲ್ತುಳಿತ ಘಟನೆ ಬಹುದೊಡ್ಡ ದುರಂತವಾಗಿ ದಾಖಲಾಗಿದೆ. ಯಾವುದೇ ಮಾನದಂಡವಿಲ್ಲದೇ ರಾಷ್ಟ್ರೀಯ ಅಥವಾ ರಾಜ್ಯದ ಮಹತ್ವದ ಹಿನ್ನೆಲೆಯಿಲ್ಲದೇ ವಿವೇಚನಾರಹಿತವಾಗಿ ಪ್ರಜಾಪ್ರಭುತ್ವದ ದೇಗುಲ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸಂದರ್ಭದ ಲಾಭ ಪಡೆಯಬಹುದು ಎಂಬ ದುರಾಸೆಯಿಂದ ರಾಜಧಾನಿಯ ಹೃದಯ ಭಾಗವನ್ನು ಸ್ಮಶಾನವನ್ನಾಗಿಸಿ ಸಂಭ್ರಮಾಚರಣೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಇಂದು ಕರ್ನಾಟಕದ ಜನತೆ ದಿನವಿಡೀ ಶಪಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನೈತಿಕತೆ ಮೆರೆದು ರಾಜಿನಾಮೆ ನೀಡಿ ಗೌರವ ಉಳಿಸಿಕೊಳ್ಳಬೇಕಾದ ಮುಖ್ಯಮಂತ್ರಿ, ಉಪ-ಮುಖ್ಯಮಂತ್ರಿ ಹಾಗೂ ಗೃಹಸಚಿವರು ಪೊಲೀಸ್ ಅಧಿಕಾರಿಗಳ ತಲೆದಂಡ ಪಡೆದುಕೊಂಡಿರುವುದು ನಿಜಕ್ಕೂ ತುಘಲಕ್ ಆಡಳಿತವನ್ನು ನೆನಪಿಸುತ್ತಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿದ್ದಾರೆ.

ಯಾರು ಸತ್ತರೇನು? ಯಾರು ನೊಂದರೇನು? ನಾವು ಮಾತ್ರ ಅಧಿಕಾರದಲ್ಲಿರಬೇಕೆಂಬ ಭಂಡತನಕ್ಕೆ ಅಂಟಿ ಕುಳಿತಿರುವ ಕಾಂಗ್ರೆಸ್ ಸರ್ಕಾರವನ್ನು ಇತಿಹಾಸಕ್ಕೆ ಕಪ್ಪು ಚುಕ್ಕಿ ಅಂಟಿಸಿದ ಕಾರಣಕ್ಕೆ ಜನರೇ ಕಿತ್ತೊಗೆಯುವ ಅನಿವಾರ್ಯ ಸಂದರ್ಭ ಸಮೀಪಿಸುತ್ತಿದೆ ಎಂದು ವಿಜಯೇಂದ್ರ ವಿಶ್ಲೇಷಣೆ ಮಾಡಿದ್ದಾರೆ.

ಪೊಲೀಸ್ ಅಧಿಕಾರಿಗಳನ್ನು ಬಲಿಪಶು ಮಾಡಿ, ‘ಕೋತಿ ತಾನು ತಿಂದು ಮೇಕೆ ಮೂತಿಗೆ ಒರೆಸಿದಂತೆ’ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಗೃಹ ಸಚಿವ ಪರಮೇಶ್ವರ್ ಅವರುಗಳು ತಪ್ಪಿಸಿಕೊಳ್ಳಲಾಗದು. ತಕ್ಷಣವೇ ಮೂವರೂ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ತಮ್ಮ ಗೌರವ ಕಾಪಾಡಿಕೊಳ್ಳಲಿ ಎಂದು ವಿಜಯೇಂದ್ರ ಒತ್ತಾಯಿಸಿದ್ದಾರೆ.