Thursday, May 28

ಅಮನ ಜೆ ಕುಮಾರ್ ಅವರ 5ನೇ ಕೃತಿ ‘ದಿ ಮಿಸ್ಟಿಕಲ್ ವೇವ್ಸ್’ ಬಿಡುಗಡೆ

ಬೆಂಗಳೂರು: ಅತಿ ಕಿರಿಯ ಕವಯಿತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಅಮನ ಜೆ ಕುಮಾರ್ ಅವರ 5ನೇ ಕೃತಿ ‘ದಿ ಮಿಸ್ಟಿಕಲ್ ವೇವ್ಸ್’ ಇದೀಗ ಸಾರಸ್ವತ ಲೋಕದ ಗಮನಸೆಳೆದಿದೆ. ದೇಶದ ಅತ್ಯುನ್ನತ ನಾಗರೀಕ ಪ್ರಶಸ್ತಿಯಾದ ಭಾರತ ರತ್ನ ಪುರಸ್ಕೃತ, ಪ್ರೊಫೆಸರ್ ಸಿ.ಎನ್.ಆರ್. ರಾವ್ ಅವರು ಅಮನ ಜೆ ಕುಮಾರ್ ಅವರ 5ನೇ ಪುಸ್ತಕ “ದಿ ಮಿಸ್ಟಿಕಲ್ ವೇವ್ಸ್” ಅನ್ನು ಬಿಡುಗಡೆ ಮಾಡಿದ್ದಾರೆ.

ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ ನ ಗೌರವಾಧ್ಯಕ್ಷರು ಹಾಗೂ ಲೈನಸ್ ಪಾಲಿಂಗ್ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕರಾಗಿರುವ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಗೌರವ ಪ್ರಾಧ್ಯಾಪಕರಾಗಿರುವ ಪ್ರೊಫೆಸರ್ ಸಿ.ಎನ್.ಆರ್. ರಾವ್ ಅವರು, ಯುವ ಪ್ರತಿಭೆ ಅಮನ ಜೆ ಕುಮಾರ್ ಅವರ ಕೃತಿ ಕೌಶಲ್ಯ ಬಗ್ಗೆ ಕೊಂಡಾಡಿದರು.

ದಿ ಮಿಸ್ಟಿಕಲ್ ವೇವ್ಸ್’ (ಕವನ ಸಂಕಲನ)?

ದಿ ಮಿಸ್ಟಿಕಲ್ ವೇವ್ಸ್ ಒಬ್ಬ ವ್ಯಕ್ತಿಯ ಜೀವನ ಪಯಣದ ಪ್ರತಿಬಿಂಬದಂತಿದೆ. ಅನುಭವಗಳು, ನಿರೀಕ್ಷೆಗಳು ಮತ್ತು ಅಪಾರ ಆನಂದದ ಸಂಯೋಜನೆಯಾಗಿರುವ ಈ ಕೃತಿ ಬ್ಲ್ಯಾಕ್‌ಔಟ್ ಕವನಗಳು ಮತ್ತು ಸೊನೆಟ್‌ಗಳ ಸಮನ್ವಯವಾಗಿದೆ. ಕಾವ್ಯದ ಎರಡು ವಿಭಿನ್ನ ಶೈಲಿಗಳ ಅದ್ಭುತ ಸಂಯೋಜನೆಯಾದ ಈ ಕೃತಿ ಓದುಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಪ್ರತಿಯೊಂದು ಪದವೂ ತನ್ನೊಳಗೆ ಆಳವಾದ ಅರ್ಥ ಮತ್ತು ಚಿಂತನೆಯ ಸಾಗರವನ್ನು ಹೊಂದಿದ್ದು, ಓದುಗರ ಕಲ್ಪನೆ ಹಾಗೂ ಬುದ್ಧಿವಂತಿಕೆಯಿಂದ ಅನಾವರಣಗೊಳ್ಳುವಂತಹ ವಿಶಿಷ್ಟತೆಯನ್ನು ಹೊಂದಿದೆ. ಕಡಿಮೆ ಪದಗಳಲ್ಲಿ ಹೆಚ್ಚು ಅರ್ಥವನ್ನು ವ್ಯಕ್ತಪಡಿಸುವ ಈ ಕೃತಿ ಅನೇಕ ಕಥೆಗಳ ನೇಯ್ಗೆಯಂತಿದೆ. ಅಂತರರಾಷ್ಟ್ರೀಯ ಬುಕ್ಕರ್ ಪ್ರಶಸ್ತಿ ವಿಜೇತರಾದ ಬಾನು ಮುಷ್ಟಾಕ್ ಅವರು ಈ ಪುಸ್ತಕದ ಮುನ್ನುಡಿಯನ್ನು ಬರೆದಿದ್ದಾರೆ.

ಅಮನ ಜೆ ಕುಮಾರ್ ಅವರು ಇತ್ತೀಚೆಗೆ ಆರ್.ವಿ. ಪಿಯು ಕಾಲೇಜು, ಜಯನಗರದಲ್ಲಿ 12ನೇ ತರಗತಿಯನ್ನು ಪೂರ್ಣಗೊಳಿಸಿದ್ದಾರೆ. ಬೆಂಗಳೂರಿನ ಬಿಷಪ್ ಕಾಟನ್ ಗರ್ಲ್ಸ್ ಸ್ಕೂಲ್‌ನಲ್ಲಿ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ, 11ನೇ ವಯಸ್ಸಿನಲ್ಲಿಯೇ ಅವರು ಕವನಗಳು ಹಾಗೂ ಪುಸ್ತಕಗಳನ್ನು ಬರೆಯಲು ಪ್ರಾರಂಭಿಸಿದರು. ಈ ವರೆಗೆ ಅಮನ ಜೆ ಕುಮಾರ್ ಅವರ ನಾಲ್ಕು ಪುಸ್ತಕಗಳು ಪ್ರಕಟವಾಗಿದ್ದು, ಮೂರು ಇಂಗ್ಲಿಷ್ ಮತ್ತು‌ ಒಂದು ಹಿಂದಿ ಭಾಷೆಯಲ್ಲಿ ಪ್ರಕಟಗೊಂಡಿವೆ. ಅವರ ಮೊದಲ ಪುಸ್ತಕ “Echoes of Soulful Poems”ಎರಡನೇ ಪುಸ್ತಕ “World Amidst the Words” ಮೂರನೇ ಹಿಂದಿ ಸಾಹಿತ್ಯ ಕೃತಿ “Lafzon Ki Mehphil” ನಾಲ್ಕನೇ ಪುಸ್ತಕ “Galore of Mysteries”.

ಅಮನ ಜೆ ಕುಮಾರ್ ಅವರ ಅನೇಕ ಲೇಖನಗಳು ಮತ್ತು ಕಥೆಗಳು ಮುದ್ರಣ ಮಾಧ್ಯಮ, ವಿದ್ಯುನ್ಮಾನ ಮಾಧ್ಯಮ ಹಾಗೂ ಆನ್‌ಲೈನ್ ಪೋರ್ಟಲ್‌ಗಳಲ್ಲಿ ಪ್ರಕಟವಾಗಿವೆ. ಸಾಹಿತ್ಯದ ಜೊತೆಗೆ ಅವರು ವಿದ್ಯಾಭ್ಯಾಸದಲ್ಲಿಯೂ ಉತ್ತಮ ಸಾಧನೆ ತೋರಿದ್ದಾರೆ.

India Book of Records ನಿಂದ “ಭಾರತದ ಅತಿ ಕಿರಿಯ ಕವಯಿತ್ರಿ” ಎಂಬ ಗೌರವ, Asia Book of Records ನಿಂದ “ಗ್ರ್ಯಾಂಡ್ ಮಾಸ್ಟರ್” ಪ್ರಶಸ್ತಿ, Kautilya Youngest Poetess of the Year Award — ಗೋವಾ ರಾಜ್ಯಪಾಲರಿಂದ ಪ್ರದಾನ, Noble Book of World Record ನಿಂದ “ಅತ್ಯಂತ ಹೆಚ್ಚು ಕವನಗಳನ್ನು ರಚಿಸಿದ ಕವಯಿತ್ರಿ” ಎಂಬ ಗೌರವ (ಏಪ್ರಿಲ್ 2020ರಿಂದ ನವೆಂಬರ್ 2021ರವರೆಗೆ 337 ಕವನಗಳು), World Record University ನಿಂದ “ಅತಿ ಕಿರಿಯ ಕವಯಿತ್ರಿ” ಪ್ರಶಸ್ತಿ, International Book of World Record ನಿಂದ “ಅತಿ ಕಿರಿಯ ಕವಯಿತ್ರಿ” ಎಂಬ ಮಾನ್ಯತೆ, Wonder Book of World Record ನಿಂದ “ಅತಿ ಕಿರಿಯ ಲೇಖಕಿ” ಗೌರವಕ್ಕೆ ಅಮನ ಜೆ ಕುಮಾರ್ ಪಾತ್ರರಾಗಿದ್ದಾರೆ.

ದೇಶದ ಪ್ರತಿಷ್ಠಿತ, ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿಯ ಹಿರಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷಯೂ ಆಗಿರುವ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಮಂಡಳಿ ಕಾರ್ಯದರ್ಶಿ ಡಾ.ಲತಾ ಟಿ.ಎಸ್ ಅವರ ಪುತ್ರಿ ಅಮನ ಜೆ ಕುಮಾರ್, Golden Book of World Records ನಿಂದ ಸತತ ವರ್ಷಗಳಲ್ಲಿ ಕವನ ಸಂಕಲನಗಳನ್ನು ಪ್ರಕಟಿಸಿದ ಅತಿ ಕಿರಿಯ ಕವಯಿತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.